ಲಖನೌ: ಶಿಕ್ಷಣ ನೀಡಿದ ಗುರು ದ್ರೋಣಾಚಾರ್ಯರಿಗೆ ಏಕಲವ್ಯ ತನ್ನ ಬಲಗೈ ಹೆಬ್ಬೆರಳನ್ನು ‘ಗುರುದಕ್ಷಿಣೆ’ಯಾಗಿ ನೀಡಿದ ಪ್ರಸಂಗ ಮಹಾಭಾರತದಲ್ಲಿ ಬರುತ್ತದೆ. ಇದೀಗ, ಪ್ರಸಿದ್ಧ ಹಿಂದೂ ದಾರ್ಶನಿಕ ಮತ್ತು ಪದ್ಮವಿಭೂಷಣ ಪುರಸ್ಕೃತ ರಾಮಭದ್ರಾಚಾರ್ಯ ಸ್ವಾಮೀಜಿ ಅವರು, ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಗೆ ದೀಕ್ಷೆ ನೀಡಿ ‘ಗುರುದಕ್ಷಿಣೆ’ಯಾಗಿ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಕೇಳಿದ್ದಾರೆ.
‘ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅವರ ಪತ್ನಿ ಸುನಿತಾ ದ್ವಿವೇದಿ ಅವರು ಬುಧವಾರ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಉಪೇಂದ್ರ ಅವರಿಗೆ ಅತ್ಯಂತ ಶಕ್ತಿಶಾಲಿ ಮತ್ತು ಪವಿತ್ರವಾದ ರಾಮಮಂತ್ರದ ದೀಕ್ಷೆ ನೀಡಲಾಯಿತು. ಈ ಮಂತ್ರವನ್ನು ಮಾತೆ ಸೀತೆಯಿಂದ ಪಡೆದಿದ್ದ ಹನುಮಾನ್, ಲಂಕಾ ಯುದ್ಧವನ್ನು ಜಯಸಿದ್ದನು’ ಎಂದು ಸ್ವಾಮೀಜಿ ತಿಳಿಸಿದರು.
ದೀಕ್ಷೆಯು ಹಿಂದೂ ಧರ್ಮದ ಒಂದು ಧಾರ್ಮಿಕ ಪ್ರಕ್ರಿಯೆ. ದೀಕ್ಷೆ ಕೊಡುವವರನ್ನು ಗುರುವಾಗಿಯೂ, ತೆಗೆದುಕೊಳ್ಳುವವರನ್ನು ಶಿಷ್ಯರನ್ನಾಗಿಯೂ ಪರಸ್ಪರರು ಸ್ವೀಕರಿಸುತ್ತಾರೆ.
‘ದೀಕ್ಷೆ ಪಡೆದ ದ್ವಿವೇದಿ ಅವರು ಗುರುದಕ್ಷಿಣೆಯಾಗಿ ಏನನ್ನು ನೀಡಬೇಕು ಎಂದು ಕೇಳಿದರು. ಆಗ ನಾನು, ಆಭರಣ ಅಥವಾ ಬಟ್ಟೆ ಬೇಡ. ಪಿಒಕೆಯನ್ನು ಗುರುದಕ್ಷಿಣೆಯಾಗಿ ಪಡೆಯಲು ಬಯಸುತ್ತೇನೆ ಎಂದು ತಿಳಿಸಿದೆ’ ಎಂದರು.
‘ಜನರಲ್ ದ್ವಿವೇದಿ ಅವರಿಗೆ ದೀಕ್ಷೆ ನೀಡಿದ್ದಕ್ಕೆ ಹೆಮ್ಮೆಯಿದೆ. ದೇಶಕ್ಕೆ ಶಸ್ತ್ರದಷ್ಟೇ ಶಾಸ್ತ್ರ ಮತ್ತು ಸದಾಚಾರವೂ ಮುಖ್ಯ’ ಎಂದು ಅವರು ಹೇಳಿದರು. ದೀಕ್ಷೆ ಪಡೆದ ದ್ವಿವೇದಿ ಅವರು ಆಶ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.