ADVERTISEMENT

ಮೋದಿ ಚೀನಾ ಅಧ್ಯಕ್ಷರ ಹಿಂದೆ ಓಡುವುದೇಕೆ?: ಓವೈಸಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 3:28 IST
Last Updated 26 ಆಗಸ್ಟ್ 2023, 3:28 IST
ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ
ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ   

ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆಗಾಗಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಹಿಂದೆ ಯಾಕೆ ಓಡುತ್ತಿದ್ದಾರೆ ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಪ್ರಶ್ನಿಸಿದ್ದಾರೆ. 

ಭಾರತದ ಭೂಮಿಯನ್ನು ಚೀನಾ ಕಬಳಿಸಿದೆ. ಈ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ಮೋದಿ ಹಾಗೂ ಷಿ ಜಿನ್‌ಪಿಂಗ್‌ ನಡುವಿನ ಮಾತುಕತೆ ಬಗ್ಗೆ ವಿದೇಶಾಂಗ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಬೇಕಿತ್ತು. ಮೋದಿಯವರು ಮಾತುಕತೆ ಬಯಸಿದ್ದರು ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿದೆ. ಬಳಿಕ ನಮ್ಮ ವಿದೇಶಾಂಗ ಕಾರ್ಯದರ್ಶಿ ಬೇರೆಯದೇ ಹೇಳಿಕೆ ನೀಡಿದರು’ ಎಂದು ಓವೈಸಿ ಸುದ್ದಿಗಾರರಿಗೆ ತಿಳಿಸಿದರು. 

ADVERTISEMENT

‘ಪ್ರಧಾನಿಯವರು ಮಾತುಕತೆಗಾಗಿ ಚೀನಾ ಅಧ್ಯಕ್ಷರ ಹಿಂದೆ ಏಕೆ ಓಡುತ್ತಾರೆ? ಲಡಾಖ್‌ ಗಡಿಯಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಪ್ರಧಾನಿಯವರು ದೇಶಕ್ಕೆ ಏಕೆ ಮಾಹಿತಿ ನೀಡುತ್ತಿಲ್ಲ’ ಎಂದು ಓವೈಸಿ ಪ್ರಶ್ನಿಸಿದರು.

‘ನಮ್ಮ ಸೈನಿಕರು ಎತ್ತರದ ಬೆಟ್ಟಗಳ ನಡುವೆ ಚೀನಿ ಸೈನಿಕರನ್ನು ಕಳೆದ 40 ತಿಂಗಳಿನಿಂದ ಎದುರಿಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಚೀನಾದ ಮುಂದೆ ನಡು ಬಗ್ಗಿಸಿದ್ದರಿಂದ ನಾವು ನಮ್ಮ ಪ್ರದೇಶ ಕಳೆದುಕೊಳ್ಳಬೇಕಾಯಿತು. ಚೀನಾ ವಶಪಡಿಸಿಕೊಂಡಿರುವ 2 ಸಾವಿರ ಚದರ ಕಿ.ಮೀ ಭೂಮಿಯು ಬಿಜೆಪಿಯ ಖಾಸಗಿ ಸ್ವತ್ತಲ್ಲ. ಈ ದೇಶದ ನೆಲ. ಇದು ನಮ್ಮ ದೇಶದ ಭದ್ರತೆಯ ಅವಿಭಾಜ್ಯ ಅಂಗವಾಗಿದೆ’ ಎಂದು ಓವೈಸಿ ‌ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.