ADVERTISEMENT

‘ಎಮಿಸ್ಯಾಟ್‌’ ದಾರಿಗೆ ಬಾಹ್ಯಾಕಾಶ ತ್ಯಾಜ್ಯ ಅಡ್ಡಿ?

ಘರ್ಷಣೆ ತಡೆಗೆ ಕ್ರಮ ಅನುಸರಿಸುವ ಇಸ್ರೊ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 3:29 IST
Last Updated 1 ಏಪ್ರಿಲ್ 2019, 3:29 IST
ಎ–ಸ್ಯಾಟ್
ಎ–ಸ್ಯಾಟ್   

ನವದೆಹಲಿ: ಧ್ರುವಗಾಮಿ ಉಡಾವಣಾ ವಾಹನ (ಪಿಎಸ್‌ಎಲ್‌ವಿ) ಸೋಮವಾರ ಉಡಾವಣೆಯಾಗಲಿದ್ದು, ಬಾಹ್ಯಾಕಾಶ ತ್ಯಾಜ್ಯದಿಂದ ಇದಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆಯೇ ಎನ್ನುವ ಪ್ರಶ್ನೆ ಇದೀಗ ವೈಜ್ಞಾನಿಕ ವಲಯದಲ್ಲಿ ಮೂಡಿದೆ.

ಇಸ್ರೊ ಹಾಗೂ ಡಿಆರ್‌ಡಿಒ ಜಂಟಿಯಾಗಿ ‘ಎಮಿಸ್ಯಾಟ್’ವನ್ನುಉಪಗ್ರಹ ಉಡಾವಣೆ ಮಾಡುತ್ತಿವೆ.

ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನು ಹೊಡೆದು ಉರುಳಿಸುವ ಉಪಗ್ರಹ ನಿರೋಧಕ ಕ್ಷಿಪಣಿ (ಎ–ಸ್ಯಾಟ್) ಕಳೆದ ವಾರವಷ್ಟೆ ಪರೀಕ್ಷೆ ನಡೆಸಲಾಗಿತ್ತು. ಈ ಕ್ಷಿಪಣಿ ಭೂಮಿಯಿಂದ ಅಂದಾಜು 300 ಕಿ.ಮೀ. ಎತ್ತರದಲ್ಲಿ ಹೊಸ ಬಾಹ್ಯಾಕಾಶ ತ್ಯಾಜ್ಯಗಳನ್ನು ಸೃಷ್ಟಿಸಿದೆ. ಈ ತ್ಯಾಜ್ಯ ಇರುವ ವಲಯವನ್ನು ಹಾದುಕೊಂಡೇ ‘ಎಮಿಸ್ಯಾಟ್’ ಮುಂದೆ ಸಾಗಬೇಕಿದೆ.

ADVERTISEMENT

ಇದೀಗ ಈ ತ್ಯಾಜ್ಯದಿಂದ ಉಂಟಾಗಬಹುದಾದ ಅಪಾಯಗಳೇನು ಮತ್ತು ಇವುಗಳನ್ನು ತಗ್ಗಿಸಲು ಇಸ್ರೊ ಯೋಜನೆ ರೂಪಿಸಿಕೊಂಡಿದೆಯೆ ಎನ್ನುವ ಪ್ರಶ್ನೆಗಳು ಎದುರಾಗಿವೆ.

‘ಈಗ ಸೃಷ್ಟಿಯಾಗಿರುವ ಬಾಹ್ಯಾಕಾಶ ತ್ಯಾಜ್ಯ,ಮುಂದಿನ ಕೆಲವು ವಾರಗಳ ತನಕವಂತೂ ಇತರೆ ಉಪಗ್ರಹ, ಕ್ಷಿಪಣಿಗಳ ಹಾದಿಯಲ್ಲಿ ಅಡ್ಡ ಬರಬಹುದು’ ಎನ್ನುತ್ತಾರೆ ತಜ್ಞರು.

‘ಪ್ರತಿ ಉಪಗ್ರಹ ಉಡಾವಣೆಯಾದಾಗಲೂಸಹಜವಾಗಿಯೇ ಸಣ್ಣ ಬೋಲ್ಟ್‌ಗಳು, ಉಷ್ಣನಿರೋಧಕ ಕವಚಗಳು ಸೇರಿದಂತೆ 100ರಿಂದ 150 ತ್ಯಾಜ್ಯದ ತುಣುಕುಗಳು ಬಾಹ್ಯಾಕಾಶದಲ್ಲಿ ಸೃಷ್ಟಿಯಾಗುತ್ತವೆ’ಎಂದು ಡಿಆರ್‌ಡಿಒ ಮಾಜಿ ಮುಖ್ಯಸ್ಥ ಹಾಗೂ ಪ್ರಸ್ತುತ ನೀತಿ ಆಯೋಗದ ಸದಸ್ಯರಾಗಿರುವ ವಿ.ಕೆ. ಸಾರಸ್ವತ್ ಅವರು ವಿವರಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

‘ಒಮ್ಮೆ ಸೃಷ್ಟಿಯಾಗುವ ಬಾಹ್ಯಾಕಾಶ ತ್ಯಾಜ್ಯ ಅಲ್ಲಿಯೇ ಉಳಿಯುತ್ತವೆ ಸಹ. ಏಕೆಂದರೆ ಒಮ್ಮೆ ವಾಯುಮಂಡಲದಿಂದ ಹೊರಹೋದ ವಸ್ತುಗಳು ವಾಪಸ್ ಬರುವುದಿಲ್ಲ. ಅಲ್ಲದೆ ಉಪಗ್ರಹ ಯಾವ ವೇಗದಲ್ಲಿತ್ತೋ ಅದೇ ವೇಗದಲ್ಲಿ ಆ ತ್ಯಾಜ್ಯಗಳು ಬಾಹ್ಯಾಕಾಶದಲ್ಲಿ ತಿರುಗುತ್ತಿರುತ್ತವೆ. ಆದ್ದರಿಂದ ಯಾವುದೇ ಉಪಗ್ರಹ, ಕ್ಷಿಪಣಿಗಳ ಹಾದಿಯಲ್ಲಿ ಅವು ಅಡ್ಡ ಬರುವ ಸಂಭವ ಇರುತ್ತದೆ. ಸಾಧ್ಯವಾದಷ್ಟೂ ಇಂತಹ ತ್ಯಾಜ್ಯಗಳನ್ನು ನಿವಾರಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ಕಾರ್ಯರೂಪದಲ್ಲಿದೆ. ಭಾರತ ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಹೆಚ್ಚಿನ ನಿಗಾ’
‘ಬಾಹ್ಯಾಕಾಶದಲ್ಲಿ ತ್ಯಾಜ್ಯಗಳ ಜತೆಗೆ ಘರ್ಷಣೆ ಉಂಟಾಗುವುದನ್ನು ತಡೆಯಲು ಇಸ್ರೊ ಕೆಲವು ಕ್ರಮಗಳನ್ನು ಅನುಸರಿಸುತ್ತದೆ. ಯಾವುದೇ ಉಪಗ್ರಹ, ಕ್ಷಿಪಣಿ ಉಡಾವಣೆಗೆ ಮೊದಲು, ಬಾಹ್ಯಾಕಾಶ ತ್ಯಾಜ್ಯಗಳ ಕುರಿತು ಗಮನ ವಹಿಸಲಾಗುತ್ತದೆ. ಈ ಬಾರಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ನಿಗಾ ವಹಿಸಲಾಗುವುದು’ ಎಂದು ಇಸ್ರೊ ಸಹಾಯಕ ವೈಜ್ಞಾನಿಕ ಕಾರ್ಯದರ್ಶಿ ವಿವೇಕ್ ಸಿಂಗ್ ತಿಳಿಸಿದ್ದಾರೆ.

ಈ ಹಿಂದೆ ಹಲವು ಸಂದರ್ಭಗಳಲ್ಲಿ, ಶ್ರೀಹರಿಕೋಟಾದಿಂದ ರಾಕೆಟ್ ಉಡಾವಣೆಯಾಗುವ ವೇಳೆ, ಬಾಹ್ಯಾಕಾಶ ತ್ಯಾಜ್ಯ ಎದುರಾಗುವುದನ್ನು ಇಸ್ರೊದ ತಂಡ ಪತ್ತೆ ಮಾಡಿತ್ತು. ಉಡಾವಣೆಯನ್ನು ಕೆಲವು ನಿಮಿಷ ಮುಂದೂಡಿ ದಾರಿ ಸುಗಮವಾಗಿರುವುದನ್ನು ಖಾತ್ರಿ ಪಡಿಸಿಕೊಂಡು ಬಳಿಕ ಕ್ಷಿಪಣಿ ಉಡಾಯಿಸಿರುವ ನಿದರ್ಶನಗಳಿವೆ.

ಪತ್ತೆಗೆ ರೆಡಾರ್
ಬಾಹ್ಯಾಕಾಶ ತ್ಯಾಜ್ಯ ಪತ್ತೆ ಮಾಡುವ ಸಲುವಾಗಿ ಇಸ್ರೊ ಈಚೆಗಷ್ಟೆ ವಿಶೇಷ ರೆಡಾರ್ ಅನ್ನು ಶ್ರೀಹರಿಕೋಟಾದಲ್ಲಿ ಅಳವಡಿಸಿದೆ. ಇದರ ಹೊರತಾಗಿ ಬಾಹ್ಯಾಕಾಶದಲ್ಲಿನ ಪರಿಸ್ಥಿತಿ ಕುರಿತುಅಮೆರಿಕದ ಸೇನಾಪಡೆ ನೀಡುವ ಮಾಹಿತಿಗಳನ್ನು ಸಹ ಭಾರತದ ಬಾಹ್ಯಾಕಾಶ ತಜ್ಞರು ಅವಲಂಬಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.