ADVERTISEMENT

ಆಶಾ ಕಾರ್ಯಕರ್ತೆಯರಿಗೆ ಸೌಲಭ್ಯಗಳ ಕೊರತೆ: ಸರ್ಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 25 ಮೇ 2021, 8:20 IST
Last Updated 25 ಮೇ 2021, 8:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ದೇಶದಾದ್ಯಂತ ಆಶಾ ಕಾರ್ಯಕರ್ತೆಯರು ಸಂಕಷ್ಟದ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂಬ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್‌ ನೀಡಿದೆ.

ದೇಶದ ಗ್ರಾಮೀಣ ಜನಸಂಖ್ಯೆಯ ಆರೋಗ್ಯ ನಿರ್ವಹಣೆ ಬಹುತೇಕ ಆಶಾ ಕಾರ್ಯಕರ್ತರನ್ನೇ ಅವಲಂಬಿಸಿದೆ. ಆದರೆ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಸರ್ಕಾರಗಳು ಒದಗಿಸುತ್ತಿಲ್ಲ ಎಂಬ ಆರೋಪ ನಿಜವಾಗಿದ್ದರೆ ಗ್ರಾಮೀಣ ಪ್ರದೇಶದ ಆರೋಗ್ಯ ನಿರ್ವಹಣೆಯಲ್ಲಿ ಗಂಭೀರ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎಂದು ಆಯೋಗ ಹೇಳಿದೆ.

ಕೋವಿಡ್‌–19 ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡುವುದು ಬಾಕಿ ಇದೆ. ಕೋವಿಡ್‌ ನಿರ್ವಹಣೆಗೆ ಬೇಕಿರುವ ಸುರಕ್ಷತಾ ಸಾಮಾಗ್ರಿಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂಬ ದೂರುಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ದೂರಿನ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಗಳು, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್‌ ನೀಡಿದ್ದು 6 ವಾರಗಳ ಒಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.

ADVERTISEMENT

ಸರ್ಕಾರಗಳು ನೀಡುವ ವರದಿಯಲ್ಲಿ, ಪ್ರತಿಯೊಂದು ರಾಜ್ಯದಲ್ಲಿ ಎಷ್ಟು ಮಂದಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ನೀಡಬೇಕಿರುವ ವೇತನ ಮತ್ತು ಇತರ ಭತ್ಯೆಯಲ್ಲಿ ಎಷ್ಟು ಬಾಕಿ ಉಳಿಸಿಕೊಳ್ಳಲಾಗಿದೆ. ಅವರು ಕರ್ತವ್ಯ ನಿರ್ವಹಿಸಲು ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಜೊತೆಗೆ ಅವರ ಕುಟುಂಬಗಳ ಆರೋಗ್ಯ ನಿರ್ವಹಣೆಗೆ ಯಾವ ಸೌಕರ್ಯಗಳನ್ನು ನೀಡಲಾಗಿದೆ ಮತ್ತು ಕಾರ್ಯಕರ್ತೆಯರು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಯಾವ ರೀತಿಯ ಸಹಾಯವನ್ನು ಸರ್ಕಾರ ಮಾಡಲಿದೆ ಎಂಬುದನ್ನು ತಿಳಿಸಲೂ ಆಯೋಗ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.