ADVERTISEMENT

ಅಸ್ಸಾಂ: ಬಿಜೆಪಿ ಹಿರಿಯ ನಾಯಕ ಸೇರಿ 17 ಮಂದಿ ರಾಜೀನಾಮೆ 

​ಪ್ರಜಾವಾಣಿ ವಾರ್ತೆ
ಪಿಟಿಐ
Published 10 ಅಕ್ಟೋಬರ್ 2025, 0:28 IST
Last Updated 10 ಅಕ್ಟೋಬರ್ 2025, 0:28 IST
...
...   

ದಿಬ್ರುಗಢ (ಅಸ್ಸಾಂ):ಅಸ್ಸಾಂನಲ್ಲಿ ಬೊಡೊಲ್ಯಾಂಡ್‌ ಟೆರಿಟೊರಿಯಲ್‌ ಕೌನ್ಸಿಲ್‌ (ಬಿಟಿಸಿ) ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ಬೆನ್ನಲ್ಲೇ ಇದೀಗ ಬಿಜೆಪಿ ಹಿರಿಯ ನಾಯಕ ರಾಜೆನ್‌ ಗೊಹೈನ್‌ ಅವರು 17 ಸದಸ್ಯರೊಂದಿಗೆ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಇಲ್ಲಿನ ನಾಗಾಂವ್‌ ಸಂಸದೀಯ ಕ್ಷೇತ್ರದಿಂದ 4 ಬಾರಿ ಬಿಜೆಪಿ ಸಂಸದರಾಗಿದ್ದ ಹಾಗೂ ಕೇಂದ್ರದ ಮಾಜಿ ಸಚಿವರಾಗಿದ್ದ  ಗೊಹೈನ್‌, ಪಕ್ಷದ ಪ್ರಸ್ತುತ ನಾಯಕತ್ವದಿಂದ ಗೌರವ ಸಿಗುತ್ತಿಲ್ಲ ಎಂಬ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಅಸ್ಸಾಂನಲ್ಲಿ ಇನ್ನು ಕೆಲವು ತಿಂಗಳಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವಂತೆಯೇ ಈ ಬೆಳವಣಿಗೆ ನಡೆದಿದೆ. 

ರಾಜೀನಾಮೆ ನೀಡಿರುವ ಬಗ್ಗೆ ಮಾತನಾಡಿರುವ ಗೊಹೈನ್‌, ‘ಹಿಂದೆ ಪಕ್ಷದ ನಾಯಕರು ಕಾರ್ಯಕರ್ತರ ಮೇಲೆ ನಂಬಿಕೆ ಇಡುತ್ತಿದ್ದರು. ಗೌರವ ನೀಡುತ್ತಿದ್ದರು. ಆದರೆ, ಈಗ ನಾಯಕತ್ವ ಹಾಗೂ ನಮ್ಮಂತಹವರನ್ನು ನಡೆಸಿಕೊಳ್ಳುವಲ್ಲಿ ಪಕ್ಷದ ರೀತಿ–ನೀತಿ ಬದಲಾಗಿ ಹೋಗಿದೆ. ಪಕ್ಷದಲ್ಲಿ ನಿರುಪಯುಕ್ತವಾಗಿ ಇರುವುದಕ್ಕಿಂತ ಪಕ್ಷ ತೊರೆಯುವುದೇ ಲೇಸು ಎಂದು ಭಾವಿಸಿ ಈ ನಿರ್ಧಾರ ತೆಗದುಕೊಂಡಿದ್ದೇನೆ’ ಎಂದಿದ್ದಾರೆ.

ADVERTISEMENT

ಅಲ್ಲದೇ,‘ರಾಜ್ಯದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಬಾಂಗ್ಲಾದೇಶಿಗಳನ್ನು ರಾಜ್ಯದಲ್ಲಿ ನೆಲೆಯೂರಲು ಅವಕಾಶ ಕಲ್ಪಿಸಿಕೊಟ್ಟು ಸ್ಥಳೀಯರಿಗೆ ಪಕ್ಷವು ದ್ರೋಹ ಬಗೆದಿದೆ. ಹೀಗಾಗಿ ನಾನು ರಾಜೀನಾಮೆ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.  

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಸೈಕಿಯಾ ಅವರಿಗೆ ರಾಜೆನ್‌ ಪತ್ರ ಬರೆದಿದ್ದು, ಅದರಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ತತ್‌ಕ್ಷಣದಿಂದಲೇ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಆದರೆ, ಗೊಹೈನ್‌ ಅವರ ರಾಜೀನಾಮೆ ಸ್ವೀಕೃತವಾಗಿದೆಯೇ ? ಇಲ್ಲವೇ ಎಂಬುದರ ಬಗ್ಗೆ ರಾಜ್ಯ ಘಟಕದ ಅಧ್ಯಕ್ಷ ಸೈಕಿಯಾ ಯಾವುದೇ ಮಾಹಿತಿ ನೀಡಿಲ್ಲ.  ಗೊಹೈನ್‌ ಅವರು ಅಸೋಮ್‌ ಜಾತಿಯ ಪರಿಷದ್‌ಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದೂ  ಮೂಲಗಳು ತಿಳಿಸಿವೆ.

ಅಸ್ಸಾಮಿ ವಿರೋಧಿ ನೀತಿ ಕಾರಣ

ಶತಮಾನಗಳಷ್ಟು ಹಳೆಯದಾದ ಅಸ್ಸಾಮಿ ಸಮಾಜವನ್ನು ವಿಭಜಿಸಲು ಪಕ್ಷದ ರಾಜ್ಯ ಘಟಕದ ನಾಯಕರು ಪ್ರಯತ್ನಿಸುತ್ತಿದ್ದು ಕೋಮು ಸಂಘರ್ಷಗಳನ್ನು ಬೆಂಬಲಿಸುತ್ತಿದ್ದಾರೆ ಎಂದೂ ಗೊಹೈನ್‌ ದೂರಿದ್ದಾರೆ. ಜತೆಗೆ ಅಹೋಮಿಗಳು ಅಸ್ಸಾಮಿನ ಅತಿದೊಡ್ಡ ಸ್ಥಳೀಯ ಸಮುದಾಯವಾಗಿದೆ. 30–40 ವಿಧಾನಸಭಾ ಕ್ಷೇತ್ರಗಳಲ್ಲಿ ಅವರ ಪ್ರಾಬಲ್ಯವೇ ಹೆಚ್ಚಾಗಿದೆ. ಆದರೆ ಕ್ಷೇತ್ರ ಪುನರ್ವಿಂಗಡಣೆಯು ಆ ಸಮುದಾಯದ ರಾಜಕೀಯ ಪ್ರಾಬಲ್ಯವನ್ನು ಕ್ಷೀಣಿಸಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ಆಕ್ಷೇಪ ವ್ಯಕ್ತಪಡಿಸಿ ಸೂಕ್ತ ಸಲಹೆಗಳನ್ನು ನೀಡಿದರೆ ‍ಪಕ್ಷ ಅದನ್ನು ಪರಿಗಣಿಸಲೂ ಇಲ್ಲ ಎಂದು ಗೊಹೈನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಅಲ್ಲದೇ ಅಹೋಮ್‌ ಸೇರಿದಂತೆ 6 ಸ್ಥಳೀಯ ಸಮುದಾಯಗಳು ತಮಗೆ ಎಸ್‌ಟಿ ಮಾನ್ಯತೆ ಕೊಡಿಸುವಲ್ಲೂ ಪಕ್ಷ ವಿಫಲವಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.