ಗುವಾಹಟಿ: ಅಸ್ಸಾಂನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 6.5 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಬ್ರಹ್ಮಪುತ್ರ ಸೇರಿದಂತೆ ಏಳು ನದಿಗಳು ಅಪಾಯದಮಟ್ಟ ಮಿರಿ ಹರಿಯುತ್ತಿವೆ. ಹಲವಾರು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಗುವಾಹಟಿ ಹವಾಮಾನ ಇಲಾಖೆ ತಿಳಿಸಿದೆ.
ಹೈಲಾಕಂಡಿ, ಸ್ರಿಭೂಮಿ, ಮೋರಿಗಾನ್, ಕಚಾರ್, ಸೋನಿತ್‌ಪುರ ಮತ್ತು ಟಿನ್‌ಸುಕಿಯ ಜಿಲ್ಲೆಗಳಲ್ಲಿ ಆರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.
ಅಸ್ಸಾಂನ ತಗ್ಗುಪ್ರದೇಶಗಳಲ್ಲಿರುವ ಜಿಲ್ಲೆಗಳಲ್ಲಿ ಬುಧವಾರ ಮುಂಜಾನೆಯಿಂದಲೇ ಭಾರಿ ಮಳೆಯಾಗುತ್ತಿದೆ. 21 ಜಿಲ್ಲೆಗಳ 1506 ಗ್ರಾಮಗಳಲ್ಲಿನ 6,33,114 ಜನ ನಿರಾಶ್ರಿತರಾಗಿದ್ದಾರೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ರಾಜ್ಯದ ಹಲವೆಡೆ ರಸ್ತೆ, ರೈಲು ಸಂಪರ್ಕ ಸ್ಥಗಿತಗೊಡಿವೆ. 223 ಪರಿಹಾರ ಕೇಂದ್ರಗಳು ಕಾರ್ಯಚರಿಸುತ್ತಿದ್ದು, 39,746 ಜನರಿಗೆ ಆಶ್ರಯ ನೀಡಲಾಗಿದೆ.
ಪ್ರವಾಹ ಮತ್ತು ಭೂಕುಸಿತದಿಂದಾಗಿ ಈ ವರ್ಷ ಪ್ರಾಣ ಕಳೆದುಕೊಂಡವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಅರುಣಾಚಲ ಪ್ರದೇಶ: 3 ಸಾವಿರ ಜನಕ್ಕೆ ತೊಂದರೆ
ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಬುಧವಾರವೂ ಭಾರಿ ಮಳೆ ಮುಂದುವರಿದಿದ್ದು ಭೂಕುಸಿತ ಮತ್ತು ಪ್ರವಾಹದಿಂದಾಗಿ 23 ಜಿಲ್ಲೆಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ತೊಂದರೆಗೊಳಗಾಗಿದ್ದಾರೆ. ದಿಬಾಂಗ್ ಕಣಿವೆ ಮತ್ತು ಅಂಜಾವ್ ಜಿಲ್ಲೆಗಳಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ರಾಜ್ಯ ಪ್ರಮುಖ ನದಿಗಳ ನೀರಿನ ಹರಿವಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ.
ಸಿಕ್ಕಿಂ: ಇಬ್ಬರು ವಿದೇಶಿಗರು ಸೇರಿ 33 ಮಂದಿಯ ರಕ್ಷಣೆ
ಭಾರಿ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಿಂದ ಸಿಕ್ಕಿಂನ ಛಟೇನ್ ಪ್ರದೇಶದಲ್ಲಿ ಸಿಲುಕಿದ್ದ ಇಬ್ಬರು ವಿದೇಶಿಗರು ಸೇರಿದಂತೆ 33 ಮಂದಿಯನ್ನು ಭಾರತೀಯ ವಾಯುಪಡೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಲಾಚೇನ್ ಗ್ರಾಮದ ಸಂಪರ್ಕವು ಸಂಪೂರ್ಣವಾಗಿ ಮುಚ್ಚಿಹೋಗಿದ್ದು ಅಲ್ಲಿ ಸಿಲುಕಿರುವ 113 ಮಂದಿಯ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಪ್ರತಿಕೂಲ ಹವಾಮಾನ ಕಡಿದಾದ ಪ್ರದೇಶದಿಂದಾಗಿ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಸೇನೆಯ ವಿಶೇಷ ತಂಡಗಳು ಮತ್ತು ಎಂಜಿನಿಯರಿಂಗ್ ಸಲಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.