ADVERTISEMENT

ಕೋವಿಡ್–19: ಅಸ್ಸಾಂ ವೈದ್ಯೆಗೆ ಡೆಲ್ಟಾ, ಆಲ್ಫಾ ಸೋಂಕು

ಡೆಕ್ಕನ್ ಹೆರಾಲ್ಡ್
Published 19 ಜುಲೈ 2021, 17:04 IST
Last Updated 19 ಜುಲೈ 2021, 17:04 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಗುವಾಹಟಿ: ಅಸ್ಸಾಂನ ದಿಬ್ರೂಗಢ ಜಿಲ್ಲೆಯ ವೈದ್ಯೆಯೊಬ್ಬರಲ್ಲಿ ಕೊರೊನಾ ವೈರಸ್‌ನ ‘ಡೆಲ್ಟಾ’ ಮತ್ತು ‘ಆಲ್ಪಾ’ ರೂಪಾಂತರ ಸೋಂಕು ದೃಢಪಟ್ಟಿದೆ. ದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್‌ನ ಎರಡೂ ರೂಪಾಂತರ ತಳಿಯ ಸೋಂಕು ತಗುಲಿರುವ ಮೊದಲ ಪ್ರಕರಣ ಇದಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.

ವೈದ್ಯೆಯು ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದರು. ಎರಡನೇ ಡೋಸ್‌ ಪಡೆದ ತಿಂಗಳ ಬಳಿಕ ಅವರಲ್ಲಿ ಸೋಂಕು ದೃಢಪಟ್ಟಿದೆ. ಅವರಲ್ಲಿ ಸೋಂಕಿನ ಸೌಮ್ಯ ಲಕ್ಷಣಗಳು ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿಲ್ಲ ಎಂದು ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (ಆರ್‌ಎಂಆರ್‌ಸಿ) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

‘ಬಹುಶಃ ದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್‌ನ ಎರಡೂ ರೂಪಾಂತರ ತಗುಲಿರುವ ಮೊದಲ ಪ್ರಕರಣ ಇದಾಗಿರಬಹುದು. ಈ ಕುರಿತು ದಾಖಲೀಕರಣ ಪ್ರಕ್ರಿಯೆ ನಡೆಸುತ್ತಿದ್ದೇವೆ’ ಎಂದು ಐಸಿಎಂಆರ್‌–ಆರ್‌ಎಂಆರ್‌ಸಿಯ ತಜ್ಞರಾದ ಬಿಸ್ವಜ್ಯೋತಿ ಬರ್ಕಕೋಟಿ ತಿಳಿಸಿದ್ದಾರೆ.

ಪ್ರತ್ಯೇಕ ರೂಪಾಂತರ ವೈರಸ್ ಸೋಂಕಿತ ಇಬ್ಬರು ವ್ಯಕ್ತಿಗಳಿಂದ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯೆಯ ಪತಿಗೆ ‘ಆಲ್ಪಾ’ ತಳಿಯ ವೈರಸ್‌ನಿಂದ ಸೋಂಕು ತಗುಲಿತ್ತು.

ಇಂಥ ಪ್ರಕರಣ ಮೊದಲು ಕಳೆದ ವರ್ಷ ಮಾರ್ಚ್‌ನಲ್ಲಿ ಬ್ರಿಟನ್‌ನಲ್ಲಿ ವರದಿಯಾಗಿತ್ತು. ಬಳಿಕ ಬ್ರೆಜಿಲ್‌ನಲ್ಲಿಯೂ ಇಂಥದ್ದೇ ಪ್ರಕರಣ ದೃಢಪಟ್ಟಿತ್ತು.

ಅಸ್ಸಾಂನಲ್ಲಿ ಸದ್ಯ 20,000 ಸಕ್ರಿಯ ಕೋವಿಡ್‌ ಪ್ರಕರಣಗಳಿವೆ. ಕಳೆದ ಎರಡು ವಾರಗಳಿಂದ ಪ್ರತಿ ದಿನ 2,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ದಿಬ್ರೂಗಢವು ರಾಜ್ಯದಲ್ಲೇ ಅತಿಹೆಚ್ಚು ಕೋವಿಡ್ ಪ್ರಕರಣಗಳಿರುವ ಏಳು ಜಿಲ್ಲೆಗಳಲ್ಲಿ ಒಂದಾಗಿದ್ದು, ಎರಡು ವಾರಗಳಿಂದೀಚೆಗೆ ಕಂಟೈನ್‌ಮೆಂಟ್‌ ಪ್ರದೇಶವಾಗಿ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.