ADVERTISEMENT

ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯೆ: ಸಂಸತ್‌ನಲ್ಲಿ ಪ್ರತಿಧ್ವನಿ

ಸಶಸ್ತ್ರ ಪಡೆಗಳಿಗೆ ವಿಶೇಷಾಧಿಕಾರ ಕಾಯ್ದೆ ಹಿಂದಕ್ಕೆ ಪಡೆಯಲು ಲೋಕಸಭೆಯಲ್ಲಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 22:38 IST
Last Updated 6 ಡಿಸೆಂಬರ್ 2021, 22:38 IST
ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳಿಂದ ಹತ್ಯೆಗೀಡಾದ ನಾಗರಿಕರ ಸಾಮೂಹಿಕ ಅಂತ್ಯಕ್ರಿಯೆಯಲ್ಲಿ ಸೋಮವಾರ ಸಾರ್ವಜನಿಕರು ಪಾಲ್ಗೊಂಡರು     – ರಾಯಿಟರ್ಸ್ ಚಿತ್ರ
ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳಿಂದ ಹತ್ಯೆಗೀಡಾದ ನಾಗರಿಕರ ಸಾಮೂಹಿಕ ಅಂತ್ಯಕ್ರಿಯೆಯಲ್ಲಿ ಸೋಮವಾರ ಸಾರ್ವಜನಿಕರು ಪಾಲ್ಗೊಂಡರು     – ರಾಯಿಟರ್ಸ್ ಚಿತ್ರ   

ನವದೆಹಲಿ: ನಾಗಾಲ್ಯಾಂಡ್‌ನಲ್ಲಿ ಸೈನಿಕರಿಂದ 14 ನಾಗರಿಕರ ಹತ್ಯೆ ಪ್ರಕರಣವು ಲೋಕಸಭೆ ಕಲಾಪ ದಲ್ಲಿಯೂ ಸೋಮವಾರ ಪ‍್ರತಿಧ್ವನಿಸಿದೆ. ಲೋಕಸಭೆಯ ಹಲವು ಸದಸ್ಯರು ಹತ್ಯೆಯನ್ನು ಖಂಡಿಸಿದ್ದಾರೆ. ಜತೆಗೆ, ರಾಜ್ಯದ ಮೇಲೆ ಹೇರಲಾಗಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು (ಆಫ್‌ಸ್ಪ) ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದಾರೆ.

ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳಲು ಗಡಿಪ್ರದೇಶಗಳಲ್ಲಿ ನೆಲೆಸಿರುವ ಜನರ ಜತೆಗೆ ಭಾವನಾತ್ಮಕ ನಂಟು ಅಗತ್ಯ ಎಂದು ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ ಪ್ರತಿಪಾದಿಸಿದರು. ದುರದೃಷ್ಟಕರ ಹತ್ಯಾಕಾಂಡದ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

‘ಜನರನ್ನು ಮನಸೋ ಇಚ್ಛೆ ಕೊಲ್ಲುವ ಅಧಿಕಾರವನ್ನು ಭದ್ರತಾ ಪಡೆ ಗಳಿಗೆಆಫ್‌ಸ್ಪ ನೀಡುವುದಿಲ್ಲ’ ಎಂದು ನ್ಯಾಷನಲಿಷ್ಟ್‌ ಪ್ರೋಗ್ರೆಸ್ಸಿವ್‌ ಪಾರ್ಟಿಯ (ಎನ್‌ಡಿಪಿಪಿ) ಸಂಸದ ತೊಖೆಹೊ ಯೆಪ್ತೊಮಿ ಹೇಳಿದರು.

ADVERTISEMENT

ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂ ಘನೆ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ ನಂತರ ಬಲ ಪ್ರಯೋಗಿಸುವ ಮತ್ತು ಗುಂಡು ಹಾರಿಸುವ ಅಧಿಕಾರವನ್ನು ಭದ್ರತಾ ಪಡೆಗಳಿಗೆ ಆಫ್‌ಸ್ಪ ನೀಡುತ್ತದೆ.

ನಾಗಾಲ್ಯಾಂಡ್‌ನ ಪರಿಸ್ಥಿತಿ ಹದಗೆಡಲು ಅವಕಾಶ ನೀಡಬಾರದು. ಮೃತರ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡಬೇಕೆಂದು ತೃಣಮೂಲ ಕಾಂಗ್ರೆಸ್ ಸದಸ್ಯ ಸುದೀಪ್‌ ಬಂದೋಪಾಧ್ಯಾಯ ಹೇಳಿದರು. ಗುಪ್ತಚರ ಸಂಸ್ಥೆಗಳು, ಭದ್ರತಾ ಪಡೆಗಳಿಗೆ ದಾರಿ ತಪ್ಪಿಸುವ ಗುಪ್ತಚರ ಮಾಹಿತಿ ನೀಡಿದ್ದು ಹೇಗೆ ಎಂದು ಶಿವಸೇನಾದ ಸಂಸದ ವಿನಾಯಕ್‌ ರಾವುತ್‌ ಪ್ರಶ್ನಿಸಿದರು.

ಹತ್ಯಾಕಾಂಡಕ್ಕೆ ಕೇಂದ್ರದ ವಿಷಾದ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಇಂತಹ ಘಟನೆಯು ಮರುಕಳಿಸದಂತೆ ಎಲ್ಲ ಸಂಸ್ಥೆಗಳು ಎಚ್ಚರ ವಹಿಸಬೇಕು. ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯು ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಪರಿಸ್ಥಿತಿಯ ಮೇಲೆ ಕೇಂದ್ರ ಸರ್ಕಾರವು ನಿಗಾ ಇರಿಸಿದೆ. ನಾಗಾಲ್ಯಾಂಡ್‌ನಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಖಾತರಿಪಡಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಗಣಿ ಕಾರ್ಮಿಕರು ಇದ್ದ ವಾಹನವನ್ನು ನಿಲ್ಲಿಸುವಂತೆ ಸೈನಿಕರು ಸೂಚಿಸಿದ್ದರು. ವಾಹನವನ್ನು ನಿಲ್ಲಿಸುವ ಬದಲಿಗೆ ವೇಗವಾಗಿ ಕೊಂಡೊಯ್ಯಲಾಯಿತು. ವಾಹನದಲ್ಲಿ ಇದ್ದವರು ಬಂಡುಕೋರರು ಎಂಬ ಅನುಮಾನಕ್ಕೆ ಇದು ಕಾರಣವಾಯಿತು. ಹಾಗಾಗಿ ಸೈನಿಕರು ಗುಂಡು ಹಾರಿಸಿದರು ಎಂದು ಶಾ ಹೇಳಿದರು.

ಹೀಗೆ ಗುಂಡು ಹಾರಿಸಿದಾಗ, ವಾಹನದಲ್ಲಿ ಇದ್ದ ಆರು ಮಂದಿ ಮೃತಪಟ್ಟರು. ಸ್ವರಕ್ಷಣೆಗಾಗಿ ಮತ್ತು ಜನರ ಗುಂಪು ಚದುರಿಸಲು ಸೈನಿಕರು ಗುಂಡು ಹಾರಿಸಿದ್ದರಿಂದ ಮತ್ತೆ ಏಳು ಮಂದಿ ಮೃತಪಟ್ಟರು ಎಂದು ಘಟನೆಯ ವಿವರವನ್ನು ಶಾ ಅವರು ಸದನಕ್ಕೆ ನೀಡಿದರು.

ವಿರೋಧ ಪಕ್ಷಗಳ ಸದಸ್ಯರು ಶಾ ಅವರ ಹೇಳಿಕೆಯಿಂದ ಸಂತೃಪ್ತರಾಗಲಿಲ್ಲ. ಕಾಂಗ್ರೆಸ್‌, ಡಿಎಂಕೆ, ಎಸ್‌ಪಿ, ಬಿಎಸ್‌ಪಿ ಮತ್ತು ಎನ್‌ಸಿಪಿ ಸದಸ್ಯರು ಸಭಾತ್ಯಾಗ ನಡೆಸಿದರು. ಮೃತರ ಕುಟುಂಬಗಳಿಗೆ ಪರಿಹಾರ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮದ ಬಗ್ಗೆ ಶಾ ಹೇಳಿಕೆಯಲ್ಲಿ ಉಲ್ಲೇಖವೇ ಇರಲಿಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೇನೆಯ ವಿರುದ್ಧ ಕೊಲೆ ಪ್ರಕರಣ

ಕೊಹಿಮಾ (ಪಿಟಿಐ): ‘ನಾಗರಿಕರನ್ನು ಕೊಲ್ಲುವ ಉದ್ದೇಶದಿಂದಲೇ ಸೈನಿಕರು ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ಸೇನೆಯ 21ನೇ ಪ್ಯಾರಾ ಸ್ಪೆಶಲ್‌ ಫೋರ್ಸ್‌ ವಿರುದ್ಧ ನಾಗಾಲ್ಯಾಂಡ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸೈನಿಕರ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಏಕ ಉದ್ದೇಶದಿಂದ ಸಂಘಟಿತ ಕೃತ್ಯ ಎಸಗಿದ ಆರೋಪಗಳ ಅಡಿ ಎಫ್‌ಐಆರ್ ದಾಖಲಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.