ADVERTISEMENT

ದಲಿತ ವಿದ್ಯಾರ್ಥಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 5:52 IST
Last Updated 24 ಮಾರ್ಚ್ 2019, 5:52 IST

ಅಹಮದಾಬಾದ್‌: ಪಾಟಣ್ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು 17 ವರ್ಷದ ದಲಿತ ವಿದ್ಯಾರ್ಥಿಯನ್ನು ಮರಕ್ಕೆ ಕಟ್ಟಿ ತೀವ್ರವಾಗಿ ಥಳಿಸಿದ್ದಾರೆ.

ಮೀತ್‌ಕುಮಾರ್‌ ಚಾವ್ಡಾ ಥಳಿತಕ್ಕೊಳಗಾದ ಬಾಲಕ. ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಬರೆಯಲು ಹೋಗುತ್ತಿದ್ದಾಗ ಚಾವ್ಡಾನನ್ನು ರಮೇಶ್‌ ಪಟೇಲ್‌ ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಚನಸ್ಮಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸರ್ಕಾರಿ ಬಸ್‌ ನಿರ್ವಾಹಕನಾಗಿ ಕೆಲಸ ಮಾಡುವ ರಮೇಶ ಪಟೇಲ್‌, ತುರ್ತು ಕೆಲಸವಿದೆ ಬಾಎಂದು ಮಾರ್ಚ್‌ 18ರಂದು ನನ್ನನ್ನು ಕರೆದ. ಒಪ್ಪದಿದ್ದಾಗ ನನ್ನನ್ನು ತೀವ್ರವಾಗಿ ಥಳಿಸಿದರು‘ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ADVERTISEMENT

ಪಕ್ಷೇತರ ಶಾಸಕ, ದಲಿತ ಮುಖಂಡ ಜಿಗ್ನೇಶ್‌ ಮೇವಾನಿ, ’ದಲಿತ ಬಾಲಕನನ್ನು ಅಪಹರಿಸಿ ಥಳಿಸಲಾಗಿದೆ‘ ಎಂದು ಟ್ವೀಟ್‌ ಮಾಡಿದ್ದು, ಪ್ರೇಮ ಪ್ರಕರಣ ಇದಕ್ಕೆ ಕಾರಣವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಬಂದ್‌ಗೆ ಕರೆ ನೀಡುವ ಮುನ್ನ, ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

’ಮೇಲ್ನೋಟಕ್ಕೆ ಇದು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ವಿಚಾರ ಎಂದು ತಿಳಿದುಬಂದಿದೆ. ಆದರೆ, ನಿಜವಾದ ಕಾರಣ ತಿಳಿಯುವ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದೇವೆ‘ ಎಂದು ಪಾಟಣ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾ ತಿಳಿಸಿದ್ದಾರೆ.

ರಮೇಶ್‌ ಪಟೇಲ್‌ನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ವ್ಯಕ್ತಿಯನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಮತ್ತು ಬಾಲಕನ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.