ಮುಂಬೈ: ಮರಾಠಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಆಹಾರ ಮಳಿಗೆ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಏಳು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಠಾಣೆ ಜಿಲ್ಲೆಯ ಭಯಂದರ್ ಪ್ರದೇಶದಲ್ಲಿ ಆಹಾರ ಮಳಿಗೆಯ ಮಾಲೀಕನಿಗೆ ಗುಂಪೊಂದು ಮಂಗಳವಾರ ಹಲ್ಲೆ ನಡೆಸಿತ್ತು. ಹಲ್ಲೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಹಲ್ಲೆ ನಡೆಸಿದ ವ್ಯಕ್ತಿಗಳು ಎಂಎನ್‌ಎಸ್‌ನ ಲಾಂಛನ ಹೊಂದಿರುವ ಶಾಲು ಧರಿಸಿದ್ದು ವಿಡಿಯೊದಲ್ಲಿ ಕಂಡುಬಂದಿತ್ತು.
ಆಹಾರ ಖರೀದಿಸಲು ಬಂದವರಲ್ಲಿ ಒಬ್ಬನು ಅಂಗಡಿಯ ಮಾಲೀಕನಲ್ಲಿ ಮರಾಠಿಯಲ್ಲಿ ಮಾತನಾಡುವಂತೆ ಕೇಳಿಕೊಂಡಿದ್ದಾನೆ. ಅದಕ್ಕೆ ಮಾಲೀಕ ಒಪ್ಪದಿದ್ದಾಗ, ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೆಲವರು ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಶಿಮಿರಾ ಠಾಣೆ ಪೊಲೀಸರು ಎಂಎನ್‌ಎಸ್‌ನ ಏಳು ಕಾರ್ಯಕರ್ತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಗಲಭೆ, ಬೆದರಿಕೆ ಮತ್ತು ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ಬಳಿಕ ಎಚ್ಚರಿಕೆ ಕೊಟ್ಟು ಕಳುಹಿಸಲಾಯಿತು ಎಂದು ಎಸ್‌ಐ ಕಿರಣ್ ಕದಮ್ ಶುಕ್ರವಾರ ತಿಳಿಸಿದ್ದಾರೆ.
ಮಹಾರಾಷ್ಟ್ರದ ವಾಣಿಜ್ಯ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಲ್ಲಿ ಸಿಬ್ಬಂದಿಯು ಗ್ರಾಹಕರ ಜತೆ ಮರಾಠಿಯಲ್ಲೇ ವ್ಯವಹರಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಎಂಎನ್‌ಎಸ್ ಒತ್ತಾಯಿಸುತ್ತಲೇ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.