ADVERTISEMENT

5 ರಾಜ್ಯ: ಏಪ್ರಿಲ್‌ನಲ್ಲಿ ಚುನಾವಣೆ?

ಮುಖ್ಯ ಚುನಾವಣಾ ಆಯುಕ್ತರ ತಂಡ ಅಸ್ಸಾಂಗೆ ಭೇಟಿ

ಪಿಟಿಐ
Published 18 ಫೆಬ್ರುವರಿ 2026, 1:03 IST
Last Updated 18 ಫೆಬ್ರುವರಿ 2026, 1:03 IST
<div class="paragraphs"><p>ಒಂದು ದೇಶ ಒಂದು ಚುನಾವಣೆ</p></div>

ಒಂದು ದೇಶ ಒಂದು ಚುನಾವಣೆ

   

- ಐಸ್ಟಾಕ್ ಚಿತ್ರ

ನವದೆಹಲಿ: ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ವಿಧಾನಸಭೆಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ADVERTISEMENT

ಐದು ರಾಜ್ಯಗಳ ವಿಧಾನಸಭೆ ಅವಧಿಯು ಮೇ ಮತ್ತು ಜೂನ್‌ನಲ್ಲಿ ಅಂತ್ಯಗೊಳ್ಳಲಿದೆ. ಆಯೋಗವು ಮಾರ್ಚ್‌ ಮಧ್ಯಭಾಗದಲ್ಲಿ ಒಟ್ಟಿಗೆ ಚುನಾವಣೆ ನಡೆಸಲು ಅಧಿಸೂಚನೆ ಘೋಷಣೆ ಮಾಡಬಹುದು. ಆಯೋಗದ ಅಧಿಕಾರಿಗಳು ಈಗಾಗಲೇ ಐದೂ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಅಸ್ಸಾಂನಲ್ಲಿ ಚುನಾವಣೆ ಸಿದ್ಧತೆ ನಡೆಯುತ್ತಿದೆ.

ಕಳೆದ ಬಾರಿ ಪಶ್ಚಿಮ ಬಂಗಾಳಕ್ಕೆ ಎಂಟು ಹಂತಗಳಲ್ಲಿ ಮತದಾನ ನಡೆದಿತ್ತು. ಅಸ್ಸಾಂನಲ್ಲಿ ಎರಡು ಹಂತ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿತ್ತು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ ಅವರ ನೇತೃತ್ವದ ಆಯೋಗದ ತಂಡ ಶೀಘ್ರವೇ ಅಸ್ಸಾಂಗೆ ಭೇಟಿ ನೀಡಿ ಚುನಾವಣೆ ಸಿದ್ಧತೆಯ ಪರಿಶೀಲನೆ ನಡೆಸಲಿದೆ.

ಅಸ್ಸಾಂನಲ್ಲಿ ಒಂದು ಅಥವಾ ಎರಡು ಹಂತದಲ್ಲಿ ಮತದಾನ ನಡೆಸಿ, ದಿನಾಂಕ ನಿಗದಿ ಮಾಡುವಾಗ ಏಪ್ರಿಲ್‌ 14ರ ಬಿಹು ಹಬ್ಬವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅಲ್ಲಿನ ರಾಜಕೀಯ ಪಕ್ಷಗಳು ಆಯೋಗಕ್ಕೆ ಮನವಿ ಸಲ್ಲಿಸಿವೆ.

ಪುದುಚೇರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಭಾಗವಾಗಿ ಫೆಬ್ರುವರಿ 14ರಂದೇ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಫೆಬ್ರುವರಿ 10ರಂದು ಅಸ್ಸಾಂನ ಮತದಾರರ ಪಟ್ಟಿ ಪ್ರಕಟಗೊಂಡಿದೆ.

ತಮಿಳುನಾಡಿನಲ್ಲಿ ಮಂಗಳವಾರ ಎಸ್‌ಐಆರ್‌ ನಂತರದ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಿದ್ದು,
ಕೇರಳದಲ್ಲಿ ಫೆಬ್ರುವರಿ 21, ಪಶ್ಚಿಮ ಬಂಗಾಳದಲ್ಲಿ ಫೆಬ್ರುವರಿ 28ಕ್ಕೆ ಮತದಾರರ ಅಂತಿಮ ಪಟ್ಟಿ
ಪ್ರಕಟಗೊಳ್ಳುವ ಸಾಧ್ಯತೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.