ನವದೆಹಲಿ: ದೇಶೀಯವಾಗಿಯೇ ಅಭಿವೃದ್ದಿಸಿರುವ ‘ಅಸ್ತ್ರ ಬಿವಿಆರ್’ (ದೃಷ್ಟಿಗೆ ಗೋಚರವಾಗುವ ವ್ಯಾಪ್ತಿ ಮೀರಿದ–ಬಿವಿಆರ್) ಕ್ಷಿಪಣಿಗಳ ಎರಡು ಪರೀಕ್ಷಾರ್ತ ಪ್ರಯೋಗಳನ್ನು ಯಶಸ್ವಿಯಾಗಿ ಶುಕ್ರವಾರ ನಡೆಸಲಾಗಿದೆ.
‘ಒಡಿಶಾದ ಬಾಲೇಶ್ವರ ಬಳಿಯ ಚಾಂದಿಪುರದಲ್ಲಿನ ಸಮಗ್ರ ಪರೀಕ್ಷಾ ವಲಯದಲ್ಲಿ ಈ ಕ್ಷಿಪಣಿ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು’ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
‘ಸುಖೋಯ್–30 ಎಂಕೆಐ ಯುದ್ಧವಿಮಾನದಲ್ಲಿ ಅಳವಡಿಸಿದ್ದ ಈ ಕ್ಷಿಪಣಿಗಳು ಗುರಿಯನ್ನು ನಿಖರವಾಗಿ ತಲುಪಿ, ನಾಶಪಡಿಸಿತು. ಈ ಮೂಲಕ ಅಸ್ತ್ರ ಕ್ಷಿಪಣಿ ವ್ಯವಸ್ಥೆಯ ಕಾರ್ಯಕ್ಷಮತೆ ಸಾಬೀತಾಯಿತು’ ಎಂದು ತಿಳಿಸಿದೆ.
100 ಕಿ.ಮೀ.ಗಿಂತಲೂ ಅಧಿಕ ದೂರದ ಗುರಿಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ ವ್ಯವಸ್ಥೆಗಳನ್ನು ಸುಖೋಯ್–30 ಎಂಕೆಐ ಹಾಗೂ ಇತರ ಯುದ್ಧವಿಮಾನಗಳಲ್ಲಿ ಬಳಸಬಹುದಾಗಿದೆ.
ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ ವ್ಯವಸ್ಥೆಯನ್ನು ಹೈದರಾಬಾದ್ ಮೂಲದ ಭಾರತ ಡೈನಾಮಿಕ್ಸ್ ಲಿಮಿಟೆಡ್ ತಯಾರಿಸುತ್ತಿದೆ. ಇವುಗಳನ್ನು ವಾಯುಪಡೆ ಹಾಗೂ ನೌಕಾಪಡೆಗೆ ಬಳಸಲು ಉದ್ದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.