ADVERTISEMENT

ಅಟಲ್‌ ಪಿಂಚಣಿ ಯೋಜನೆಗೆ ಅತಿ ಹೆಚ್ಚು ಚಂದಾದಾರರು

ಪಿಟಿಐ
Published 5 ಸೆಪ್ಟೆಂಬರ್ 2021, 10:45 IST
Last Updated 5 ಸೆಪ್ಟೆಂಬರ್ 2021, 10:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಗೊಳಪಡುವ (ಎನ್‌ಪಿಎಸ್‌) ಅಟಲ್‌ ಪಿಂಚಣಿ ಯೋಜನೆಯು 2.8 ಕೋಟಿಗೂ ಹೆಚ್ಚು ಚಂದಾದಾರರೊಂದಿಗೆ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿ ಹೊರಹೊಮ್ಮಿದೆ.

‘ರಾಷ್ಟ್ರೀಯ ಪಿಂಚಣಿ ಯೋಜನೆಯ 4.2 ಕೋಟಿ ಬಳಕೆದಾರರಲ್ಲಿ 2020–21ರ ಅಂತ್ಯದ ವೇಳೆ ಶೇಕಡ 66 ರಷ್ಟು ಚಂದಾದಾರರು ಅಟಲ್‌ ಪಿಂಚಣಿ ಯೋಜನೆಯನ್ನು(ಎಪಿವೈ) ಆರಿಸಿಕೊಂಡಿದ್ದಾರೆ’ ಎಂದು ಎನ್‌ಪಿಎಸ್‌ನ ವಾರ್ಷಿಕ ವರದಿಯು ಹೇಳಿದೆ.

ಎನ್‌ಪಿಎಸ್‌ನ ಒಟ್ಟು ಚಂದಾದಾರರಲ್ಲಿ ರಾಜ್ಯ ಸರ್ಕಾರದ ಯೋಜನೆಯು ಶೇಕಡ 11 ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳು (ಸಿಎಬಿ) ಶೇಕಡ 1 ಮತ್ತು ರಾಜ್ಯ ಸ್ವಾಯತ್ತ ಸಂಸ್ಥೆಗಳು(ಎಸ್‌ಎಬಿ) ಶೇಕಡ 2 ರಷ್ಟು ಪಾಲನ್ನು ಹೊಂದಿವೆ.

ADVERTISEMENT

‘ಎಪಿವೈ ಬಹುತೇಕ ಚಂದಾದಾರರಲ್ಲಿ ಹೆಚ್ಚಿನವರು ಸಣ್ಣ ಪಟ್ಟಣ, ಗ್ರಾಮೀಣ ಪ್ರದೇಶಗಳಿಗೆ ಸೇರಿದವರು. ಇದು ದೇಶದ ಜನಸಂಖ್ಯಾ ಮಾದರಿಯನ್ನು ಸಹ ಪ್ರತಿಬಿಂಬಿಸುತ್ತದೆ. ಈ ಪ್ರದೇಶಗಳಲ್ಲಿ ಹೆಚ್ಚಾಗಿ ಅಸಂಘಟಿತ ವರ್ಗಕ್ಕೆ ಸೇರಿದವರು ವಾಸವಾಗಿದ್ದಾರೆ’ ಎಂದು ವರದಿ ಹೇಳಿದೆ.

ಚಂದಾದಾರರ ಬೆಳವಣಿಗೆ ದರದಲ್ಲೂ ಎಪಿವೈ ಪ್ರಾಬಲ್ಯ ಸಾಧಿಸಿದ್ದು, 2021ರ ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಎಪಿವೈಯು ಶೇಕಡ 33ರಷ್ಟು ಲಾಭ ಗಳಿಸಿದೆ.

ಕೇಂದ್ರ ಸರ್ಕಾರವು 2015ರ ಮೇ ತಿಂಗಳಲ್ಲಿ ಅಟಲ್‌ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯಲ್ಲಿ 18–40 ವರ್ಷದೊಳಗಿನ ಎಲ್ಲರೂ ಭಾಗಿಯಾಗಬಹುದು. ಚಂದಾದಾರರು 60 ವರ್ಷದ ಬಳಿಕ ಅವರ ಕೊಡುಗೆಗೆ ಅನುಸಾರವಾಗಿ ತಿಂಗಳಿಗೆ ₹1000 ದಿಂದ ₹5000 ಪಿಂಚಣಿ ಪಡೆಯುತ್ತಾರೆ. ನಿಧನದ ಬಳಿಕ ಅವರ ನಾಮಿನಿಗೆಪಿಂಚಣಿ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.