ADVERTISEMENT

ತಮ್ಮ ಮೇಲೆ ಎರಡು ಸಲ ದಾಳಿ ಯತ್ನ: ಕೇಂದ್ರ ಸಚಿವ ಅಶ್ವಿನಿ ಚೌಬೆ

ಏಜೆನ್ಸೀಸ್
Published 17 ಜನವರಿ 2023, 3:14 IST
Last Updated 17 ಜನವರಿ 2023, 3:14 IST
   

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ರಾಜ್ಯ ಖಾತೆ ಸಚಿವ ಅಶ್ವಿನಿ ಚೌಬೆ, ಕಳೆದ 24 ಗಂಟೆಗಳಲ್ಲಿ ಬಕ್ಸರ್‌ ಕ್ಷೇತ್ರದಲ್ಲಿಯೇ ತಮ್ಮ ಮೇಲೆ ಎರಡು ಸಲ ದಾಳಿ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಂಸದ ಚೌಬೆ ‘ಬಕ್ಸಾರ್‌ನಲ್ಲಿನ ರೈತರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟದ ವೇಳೆ ನನ್ನ ಮೇಲೆ ದಾಳಿ ಯತ್ನ ನಡೆಯಿತು. ಆದರೆ ನನ್ನ ಅಂಗರಕ್ಷಕರು ಮತ್ತು ಪೊಲೀಸ್ ಸಿಬ್ಬಂದಿ ದಾಳಿ ನಡೆಸಲು ಯತ್ನಿಸಿದ ಮೂವರನ್ನು ಹಿಡಿದು ನನ್ನನ್ನು ರಕ್ಷಿಸಿದರು. ಅವರನ್ನು ಹಿಡಿಯದಿದ್ದರೆ ಏನಾಗುತ್ತಿತ್ತು ಎಂದು ನನಗೆ ತಿಳಿದಿಲ್ಲ’ ಎಂದರು.

‘ದಾಳಿ ಯತ್ನ ನಡೆಸಿದವರಲ್ಲಿ ಒಬ್ಬಾತ ಕರ್ತವ್ಯ ನಿರತ ಪೊಲೀಸರ ಎದುರೇ ಪಿಸ್ತೂಲ್‌ನೊಂದಿಗೆ ಓಡಿದ್ದಾನೆ. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ’ಎಂದು ಅವರು ಆರೋಪಿಸಿದರು.

ADVERTISEMENT

ಈ ಬಗ್ಗೆ ಪೊಲೀಸ್ ಉಪ ನಿರೀಕ್ಷಕರು, ಉಪ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದೇನೆ ಎಂದು ಹೇಳಿದರು.

‘ಘಟನಾ ಸ್ಥಳದಲ್ಲಿದ್ದ ಪೊಲೀಸರು ಮತ್ತು ಕಾರ್ಯಕರ್ತರು ದಾಳಿಗೆ ಯತ್ನಿಸಿದ ಗೂಂಡಾಗಳನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದರು. ಆದರೆ ಅಲ್ಲಿ ಅವರಿಗೆ ಶಿಕ್ಷೆ ನೀಡುವ ಬದಲು ರಕ್ಷಣೆ ನೀಡಲಾಯಿತು. ಸಚಿವರು ಅವರ ಕೆಲಸ ಮಾಡುತ್ತಾರೆ, ಗೂಂಡಾಗಳು ಕೂಡ ಅವರ ಕೆಲಸ ಮಾಡುತ್ತಾರೆ ಎಂಬ ಉದ್ದಟತನದ ಮಾತು ಡಿವೈಎಸ್‌ಪಿ ಬಾಯಿಯಿಂದ ಕೇಳಿಬರುತ್ತದೆ. ಕೆಲವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ತಮ್ಮ ಮೇಲೆ ಹಲ್ಲೆ ನಡೆಸಿದ ಮೂವರನ್ನು ನಂತರ ಬಿಡುಗಡೆ ಮಾಡಲಾಯಿತು’ ‌ಎಂದು ಚೌಬೆ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.