ADVERTISEMENT

ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ 27ರಷ್ಟು ಅಧಿಕ ಮಳೆ: ಹವಾಮಾನ ಇಲಾಖೆ

ಪಿಟಿಐ
Published 1 ಸೆಪ್ಟೆಂಬರ್ 2020, 14:17 IST
Last Updated 1 ಸೆಪ್ಟೆಂಬರ್ 2020, 14:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ದೇಶದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ವಾಡಿಕೆಗಿಂತ ಶೇ 27ರಷ್ಟು ಅಧಿಕ ಪ್ರಮಾಣ ಮಳೆ ಬಿದ್ದಿದೆ. ಇದು ಕಳೆದ 120 ವರ್ಷಗಳ ಅವಧಿಯಲ್ಲಿ ಸುರಿದ ಗರಿಷ್ಠ ಪ್ರಮಾಣದ ಮಳೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹೇಳಿದೆ.

120 ವರ್ಷಗಳ ಅವಧಿಯಲ್ಲಿ ನಾಲ್ಕು ಸಲ ವಾಡಿಕೆಗಿಂತ ಅಧಿಕ ಪ್ರಮಾಣದ ಮಳೆ ಬಿದ್ದಿದೆ. ಈ ಪೈಕಿ ಆಗಸ್ಟ್‌ನಲ್ಲಿ ಬಿದ್ದಿರುವ ಮಳೆಯ ಪ್ರಮಾಣವೇ ಗರಿಷ್ಠ ಎಂದು ಇವೇ ಮೂಲಗಳು ಹೇಳಿವೆ.

‘ದೇಶದಲ್ಲಿ ಜೂನ್‌ 1ರಿಂದ ಸೆಪ್ಟೆಂಬರ್‌ 30 ವರೆಗಿನ ಅವಧಿಯನ್ನು ಮಳೆಗಾಲ ಎಂದು ಪರಿಗಣಿಸಲಾಗುತ್ತದೆ. ದೇಶದಲ್ಲಿ ಕಳೆದ ಜೂನ್‌ 1ರಿಂದ ಆಗಸ್ಟ್‌ 31ರ ವರೆಗೆ ವಾಡಿಕೆಗಿಂತ ಶೇ 10ರಷ್ಟು ಹೆಚ್ಚು ಮಳೆ ಬಿದ್ದಿದೆ’ ಎಂದು ಇಲಾಖೆಯ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ವಿಜ್ಞಾನಿ ಆರ್‌.ಕೆ.ಜೇನಮನಿ ಹೇಳಿದ್ದಾರೆ.

ADVERTISEMENT

‘ಆಗಸ್ಟ್‌ನಲ್ಲಿ ದೀರ್ಘಾವಧಿ ಸರಾಸರಿಯ (ಎಲ್‌ಪಿಎ) ಶೇ 97ರಷ್ಟು ಮಳೆ ಬೀಳಬಹುದು ಎಂದು ಮುನ್ಸೂಚನೆ ನೀಡಲಾಗಿತ್ತು. ಮುಂಗಾರು ಅವಧಿಯಲ್ಲಿ ಎಲ್‌ಪಿಎಯ ಶೇ 96ರಿಂದ 104ರಷ್ಟು ಮಳೆ ಬಿದ್ದರೂ ಅದನ್ನು ವಾಡಿಕೆ ಮಳೆಯಂದೇ ಪರಿಗಣಿಸಲಾಗುತ್ತದೆ‘ ಎಂದೂ ಅವರು ಹೇಳಿದ್ದಾರೆ.

‘ಆಗಸ್ಟ್‌ನಲ್ಲಿ ಬಂಗಾಳ ಕೊಲ್ಲಿಯಲ್ಲಿಯ ಐದು ಕಡೆಗಳಲ್ಲಿ ವಾಯುಭಾರ ಕುಸಿತ ದಾಖಲಾಗಿದೆ. ಈ ಕಾರಣದಿಂದಲೇ ಆ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ‘ ಎಂದು ಸ್ಕೈಮೆಟ್‌ ವೆದರ್‌ ಸಂಸ್ಥೆಯ ಉಪಾಧ್ಯಕ್ಷ ಮಹೇಶ್‌ ಪಲ್ವಾಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.