ಮುಂಬೈ: ಮೊಘಲ್ ದೊರೆ ಔರಂಗಜೇಬನನ್ನು ಹೊಗಳಿದ ವಿಚಾರವಾಗಿ ಸಮಾಜವಾದಿ ಪಕ್ಷದ ಶಾಸಕ ಅಬೂ ಆಸಿಂ ಆಜ್ಮಿ ಅವರ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಆಜ್ಮಿ ಅವರ ವಿರುದ್ಧ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಾಗಿತ್ತು. ಲೋಕಸಭಾ ಸದಸ್ಯ ನರೇಶ್ ಮಹಸ್ಕೆ ಅವರು ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ನಂತರದ ಬೆಳವಣಿಗೆಯಲ್ಲಿ ಠಾಣೆ ಪೊಲೀಸರು ಎಫ್‌ಐಆರ್ ಅನ್ನು ಮುಂಬೈಗೆ ವರ್ಗಾಯಿಸಿದ್ದಾರೆ. ಬಳಿಕ ಮರೈನ್ ಡಿವೈನ್ ಠಾಣೆಯಲ್ಲಿ ಆಜ್ಮಿ ಅವರ ವಿರುದ್ಧ ಮಂಗಳವಾರ ಹೊಸದಾಗಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಆಜ್ಮಿ ಅವರು ಹೇಳಿಕೆಯು ವಿವಾದಕ್ಕೆ ಕಾರಣವಾಗಿದ್ದು, ಶಿವಸೇನಾ ಬೆಂಬಲಿಗರು ಅಜ್ಮಿ ಅವರ ವಿರುದ್ಧ ಪ್ರತಿಭಟನೆ ನಡೆಸಿದರು.
ವಿಷಯವು ರಾಜ್ಯ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಕಲಾಪದಿಂದ ಅಜ್ಮಿ ಅವರನ್ನು ಅಮಾನತು ಮಾಡಬೇಕು ಎಂದು ಆಡಳಿತಾರೂಢ ಪಕ್ಷದ ಸದಸ್ಯರು ಒತ್ತಾಯಿಸಿದರು.
ಆಜ್ಮಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಒತ್ತಾಯಿಸಿದರು.
ಆಜ್ಮಿ ಹೇಳಿದ್ದೇನು?
ಮಹಾರಾಷ್ಟ್ರದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿರುವ ಆಜ್ಮಿ ಅವರು, ‘ಔರಂಗಜೇಬ ಅವರ ಆಡಳಿತದಲ್ಲಿ ಭಾರತದ ಗಡಿಯು ಅಫ್ಗಾನಿಸ್ತಾನ ಮತ್ತು ಬರ್ಮಾ (ಮ್ಯಾನ್ಮಾರ್ )ವರೆಗೂ ವಿಸ್ತರಿಸಿತ್ತು. ನಮ್ಮ ಜಿಡಿಪಿಯು ವಿಶ್ವದ ಜಿಡಿಪಿಯ ಶೇ 24ರಷ್ಟಿತ್ತು. ಭಾರತವನ್ನು ಚಿನ್ನದ ಗುಬ್ಬಚ್ಚಿ ಎಂದು ಕರೆಯಲಾಗುತ್ತಿತ್ತು’ ಎಂದು ಹೇಳಿದ್ದರು.
ಔರಂಗಜೇಬ ಮತ್ತು ಛತ್ರಪತಿ ಸಂಭಾಜಿ ಮಹಾರಾಜ ನಡುವಿನ ಯುದ್ಧದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದೊಂದು ರಾಜಕೀಯ ಕದನವಾಗಿತ್ತು ಎಂದು ಹೇಳಿದ್ದರು.
ಆಜ್ಮಿ ಪುತ್ರನ ವಿರುದ್ಧ ಪ್ರಕರಣ ಪಣಜಿ: ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಶಾಂತಿ ಕದಡಿದ ಆರೋಪಕ್ಕೆ ಸಂಬಂಧಿಸಿದಂತೆ ಆಜ್ಮಿ ಅವರ ಪುತ್ರ ಅಬೂ ಫರ್ಹಾನ್ ಆಜ್ಮಿ ಅವರ ವಿರುದ್ಧ ಗೋವಾ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ವ್ಯಕ್ತಿಯೊಬ್ಬರು ಸೋಮವಾರ ಮಧ್ಯಾಹ್ನ 11.12ಕ್ಕೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೈಡೋಲಿಮ್‌ನ ಸೂಪರ್ ಮಾರ್ಕೆಟ್‌ನಲ್ಲಿ ಎರಡು ಗುಂಪಿನ ಮಧ್ಯೆ ಜಗಳವಾಗುತ್ತಿದೆ ಎಂದು ಮಾಹಿತಿ ನೀಡಿದ್ದರು. ಹೊಡೆದಾಟದ ಸಂದರ್ಭದಲ್ಲಿ ಅಬೂ ಫರ್ಹಾನ್ ಅವರು ಪರವಾನಗಿ ಪಡೆದ ಬಂದೂಕು ಇದೆ ಎಂದು ಬೆದರಿಸಿದ್ದಾರೆ ಎಂದು ಹೇಳಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಪರೇಶ್ ನಾಯ್ಕ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.