ADVERTISEMENT

ಉಗ್ರರಿಂದ ಹತ್ಯೆಯಾಗಿದ್ದ ಯೋಧ ಔರಂಗ್‌ಜೇಬ್‌ನ ಸಹೋದರರು ಸೇನೆಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 11:01 IST
Last Updated 23 ಜುಲೈ 2019, 11:01 IST
ಕೃಪೆ: ಟ್ವಿಟರ್
ಕೃಪೆ: ಟ್ವಿಟರ್   

ರಜೌರಿ: ಕಳೆದ ವರ್ಷ ಉಗ್ರರು ಅಪಹರಣ ಮಾಡಿ ಹತ್ಯೆ ಮಾಡಿದ್ದ ಭಾರತೀಯ ಸೇನೆಯ ಯೋಧ ಔರಂಗಜೇಬ್‌ನ ಇಬ್ಬರು ಸಹೋದರರು ಸೇನೆ ಸೇರಿದ್ದಾರೆ. ದೇಶ ಸೇವೆಗಾಗಿ ಮತ್ತು ಸಹೋದರನ ಹತ್ಯೆಗೆ ಪ್ರತೀಕಾರ ತೀರಿಸುವುದಕ್ಕಾಗಿ ತಾವು ಸಶಸ್ತ್ರ ಪಡೆ ಸೇರಿದ್ದೇವೆ ಎಂದು ಹೇಳಿದ್ದಾರೆ ಈ ಸಹೋದರರು.

ಔರಂಗಜೇಬ್ ಸಹೋದರರಾದ ಮೊಹಮ್ಮದ್ ತಾರೀಖ್ (23), ಮೊಹಮ್ಮದ್ ಶಬ್ಬೀರ್ (21) ಸೋಮವಾರ ರಜೌರಿಯಲ್ಲಿ ಪ್ರಾದೇಶಿಕ ಸೈನ್ಯ ಸೇರಿದ್ದಾರೆ. ಪ್ರಾದೇಶಿಕ ಸೈನ್ಯಕ್ಕೆ ಇವರಿಬ್ಬರು ಸೇರ್ಪಡೆಯಾಗಿದ್ದು, ಪಂಜಾಬ್ ರೆಜಿಮೆಂಟಲ್ ಸೆಂಟರ್‌ನಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಎಂದು ರಕ್ಷಣಾ ಪಡೆಯ ವಕ್ತಾರರು ಹೇಳಿದ್ದಾರೆ.

ಔರಂಗಜೇಬ್ ಅವರ ಅಪ್ಪ ಮೊಹಮ್ಮದ್ ಹನೀಫ್ ಮಾಜಿ ಯೋಧರಾಗಿದ್ದಾರೆ.

ADVERTISEMENT

2018 ಜೂನ್ 14ರಂದು ಪುಲ್ವಾಮದಿಂದ ಔರಂಗಜೇಬ್ನ್ನು ಉಗ್ರರು ಅಪಹರಿಸಿ ಹತ್ಯೆಗೈದಿದ್ದರು.ಕುಟುಂಬದೊಂದಿಗೆ ಈದ್ ಆಚರಿಸಲು ಪೂಂಚ್‌ಗೆ ಬರುತ್ತಿದ್ದಾಗ ಈ ಕೃತ್ಯ ನಡೆದಿತ್ತು.ಸೇನೆಯ 44 ರಾಷ್ಟ್ರೀಯ ರೈಫಲ್ಸ್‌ನ ಯೋಧ ಆಗಿದ್ದರು ಔರಂಗಜೇಬ್.

ನಮ್ಮ ಸಹೋದರ ದೇಶಕ್ಕಾಗಿ ಪ್ರಾಣ ನೀಡಿದ್ದಾರೆ. ನಾವು ಆತನ ದಾರಿಯನ್ನೇ ಅನುಸರಿಸಲಿದ್ದೇವೆ. ದೇಶಕ್ಕಾಗಿ ನಮ್ಮಪ್ರಾಣ ತ್ಯಾಗ ಮಾಡಬೇಕಾಗಿ ಬಂದರೆ ನಾವು ಹೆಜ್ಜೆ ಹಿಂದಿಡಲಾರೆವು.ನಮ್ಮ ಕರ್ತವ್ಯವನ್ನು ನಿರ್ವಹಿಸುವ ಮೂಲಕ ನಾವು ನಮ್ಮ ಸಹೋದರ ಮತ್ತು ಪಂಜಾಬ್ ರೆಜಿಮೆಂಟ್ ಹೆಮ್ಮೆ ಪಡುವಂತೆ ಮಾಡುತ್ತೇವೆ ಎಂದಿದ್ದಾರೆ ತಾರೀಖ್.

ಜಮ್ಮು ಕಾಶ್ಮೀರದಲ್ಲಿ ಯೋಧರಾಗಿ ಸೇವೆ ಸಲ್ಲಿಸಿದ್ದ ಹನೀಫ್, ಔರಂಗಜೇಬ್‌ನ ಹತ್ಯೆಯ ಪ್ರತೀಕಾರವನ್ನು ಈ ಇಬ್ಬರು ಸಹೋದರರು ತೀರಿಸಲಿದ್ದಾರೆ.ಆ ದಿನವನ್ನು ನೋಡುವುದಕ್ಕಾಗಿ ನಾನು ಬದುಕುಳಿಯಲಿದ್ದೇನೆ ಎಂಬ ವಿಶ್ವಾಸ ನನಗಿಲ್ಲ.ಆದರೆ ತಾರೀಖ್ ಮತ್ತು ಶಬ್ಬೀರ್ ದೇಶದ ಸೇವೆ ಮಾಡುವ ಮೂಲಕ ದೇಶದ ನಾಗರೀಕರನ್ನು ಕಾಪಾಡಲಿದ್ದಾರೆ. ನಾನು ನನ್ನ ಮಗ ಔರಂಗಜೇಬ್‌ನ್ನು ಕಳೆದುಕೊಂಡಿದ್ದೇನೆ ಎಂಬುದು ನಿಜ. ಯೋಧನಿಗಾಗಿ ಸಾವು ಸದಾ ಹೊಂಚು ಹಾಕುತ್ತಿರುತ್ತದೆ. ಆದರೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಧೈರ್ಯ ಹೆಚ್ಚಿನವರಿಗೆ ಇರುವುದಿಲ್ಲ ಎಂದು ಹನೀಫ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಔರಂಗಜೇಬ್‌ನ್ನು ಅಪಹರಿಸಿದ ಹೇಡಿಗಳು ಆತನನ್ನು ಹತ್ಯೆ ಮಾಡಿದ್ದರು. ನಾವು ಅವನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ ಹನೀಫ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.