ADVERTISEMENT

ಮಾದಕವಸ್ತು ಸೇವನೆ: ವಿಮಾನಯಾನ ಸಿಬ್ಬಂದಿಯ ಕಡ್ಡಾಯ ಪರೀಕ್ಷೆಗೆ ನಿಯಮ

ಪಿಟಿಐ
Published 2 ಸೆಪ್ಟೆಂಬರ್ 2021, 15:06 IST
Last Updated 2 ಸೆಪ್ಟೆಂಬರ್ 2021, 15:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    
ನವದೆಹಲಿ: ದೇಶದಲ್ಲಿ ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ, ಪೈಲಟ್‌ಗಳು ಇನ್ನು ಮುಂದೆ ಮಾದಕವಸ್ತು ಸೇವನೆ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಲಿದೆ. ವಿಮಾನಯಾನದ ಸುರಕ್ಷತೆ, ಸಿಬ್ಬಂದಿ ಮಾದಕವಸ್ತು ವ್ಯಸನಿಗಳಲ್ಲ ಎಂಬುದರ ಖಾತರಿಗೆ ಈ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
ಈ ಕುರಿತು ಕರಡು ನಿಯಮಗಳನ್ನು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಆಗಸ್ಟ್‌ 25ರಂದು ಪ್ರಕಟಿಸಿದೆ. ಇದರ ಪ್ರಕಾರ, ಭಾವಿ ಪೈಲಟ್‌ಗಳು ಕೂಡಾ ಹೀಗೆ ಮಾದಕವಸ್ತು ಸೇವನೆ ವಿರುದ್ಧದ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಲಿದೆ.
ಆ್ಯಂಪೆಟಮೈನ್‌, ಕ್ಯಾನಬಿಸ್‌, ಕೊಕೈನ್‌, ಒಪಿಯೊಡ್ಸ್, ಬಾರ್ಬಿಟುರೇಟ್ಸ್ ಹೆಸರಿನ ಮಾದಕವಸ್ತು ಸೇವಿಸಿದ್ದಾರೆಯೇ, ವ್ಯಸನವಿದೆಯೇ ಎಂದು ತಿಳಿಯು
ವುದು ಇದರ ಉದ್ದೇಶ. ಸದ್ಯ, ಪೈಲಟ್‌ ಹಾಗೂ ವಿಮಾನದ ಪ್ರಮುಖ ಸಿಬ್ಬಂದಿಗಳು ಮದ್ಯಪಾನ ಮಾಡಿದ್ದಾರೆಯೇ ಎಂಬುದರ ಪರೀಕ್ಷೆ ನಡೆಯಲಿದೆ.
ಕರಡು ನಿಯಮಗಳ ಅನುಸಾರ, ಮಾದಕವಸ್ತು ಸೇವನೆ ಕುರಿತಂತೆ ಎರಡನೇ ಬಾರಿ ಪರೀಕ್ಷೆಯಲ್ಲಿಯೂ ನೆಗೆಟಿವ್‌ ವರದಿ ಬಂದಲ್ಲಿ ಸಿಬ್ಬಂದಿಯ ಲೈಸೆನ್ಸ್ ಅನ್ನು ಮೂರು ವರ್ಷದ ಅವಧಿಗೆ ಅಮಾನತುಪಡಿಸಲಾಗುವುದು. ಐದನೇ ಪರೀಕ್ಷೆಯಲ್ಲಿಯೂ ನೆಗೆಟಿವ್ ಬಂದರೆ ಲೈಸೆನ್ಸ್‌ ರದ್ದುಪಡಿಸಲಾಗುತ್ತದೆ.
ಮಾದಕವಸ್ತು ಸೇವಿಸಿರುವುದುಮೊದಲ ಪರೀಕ್ಷೆಯಲ್ಲಿ ದೃಢಪಟ್ಟರೆ ಸೂಕ್ಷ್ಮ ಎನ್ನಬಹುದಾದ ಕಾರ್ಯಭಾರದಿಂದ ಸಿಬ್ಬಂದಿಯನ್ನು ತಕ್ಷಣದಿಂದಲೇ ತೆಗೆಯಲಾಗುತ್ತದೆ. ಅವರನ್ನು ಪುನಶ್ಚೇತನ ಕೇಂದ್ರಕ್ಕೆ ದಾಖಲಿಸಲಿದ್ದು, ಅಲ್ಲಿ ನೆಗೆಟಿವ್‌ ವರದಿ ಬಂದರಷ್ಟೇ ಸೇವೆಗೆ ಮರಳಿ ಪಡೆಯಲಾಗುತ್ತದೆ.

ವಿಮಾನ ನಿರ್ವಾಹಕರು, ದುರಸ್ತಿ ಹಾಗೂ ನಿರ್ವಹಣೆ ಸಿಬ್ಬಂದಿ, ಹಾರಾಟ ತರಬೇತಿ ಸಂಸ್ಥೆಗಳು, ವಾಯುದಿಕ್ಸೂಚಿ ಸೇವೆಯನ್ನು ಒದಗಿಸುವ ಸಂಸ್ಥೆಗಳು ಕೂಡಾ ಆಗಾಗ್ಗೆ ನಿಯಮಿತ ಕಾಲಾವಧಿಯಲ್ಲಿ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಬೇಕು.

ವಿಮಾನಯಾನ ನಿರ್ವಹಣಾ ಸಂಸ್ಥೆಗಳು ತರಬೇತಿ ಪೈಲಟ್‌ ಆಗಿ ನೌಕರಿಗೆ ಸೇರಿಸಿಕೊಳ್ಳುವ ಹಂತದಲ್ಲಿಯೇ, ಆತನನ್ನು ಪರೀಕ್ಷೆಗೆ ಒಳಪಡಿಸಿ ವರದಿ ಪಡೆಯುವುದು ಕಡ್ಡಾಯವಾಗಿದೆ. ಪರೀಕ್ಷೆಗೆ ಒಳಪಡಲು ನಿರಾಕರಿಸಿದಲ್ಲಿ ಲೈಸೆನ್ಸ್‌ ಅನ್ನು ಒಂದು ವರ್ಷಕ್ಕೆ ಅಮಾನತುಪಡಿಸಲಾಗುತ್ತದೆ.

ಅಮೆರಿಕದ ಫೆಡರಲ್ ಏವಿಯೇಷನ್ ಏಜೆನ್ಸಿ, ಯೂರೋಪಿಯನ್ ಯೂನಿಯನ್ ಏವಿಯೇಷನ್‌ ಸೇಫ್ಟಿ ಏಜೆನ್ಸಿ (ಎಫ್‌ಎಎಸ್‌ಎ) ಕೂಡಾ ಸಿಬ್ಬಂದಿಗೆ ಅನುಗುಣವಾಗಿ ಇಂಥ ಪೂರ್ವಪರೀಕ್ಷೆಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.