ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕಳುಹಿಸುವ ಮಹತ್ವಾಕಾಂಕ್ಷೆಯ ‘ಆ್ಯಕ್ಸಿಯಂ–4’ ಮಿಷನ್ ಉಡಾವಣೆಗೆ ಜೂನ್ 19ರಂದು ದಿನಾಂಕ ನಿಗದಿಪಡಿಸಲಾಗಿದೆ ಎಂದು ಇಸ್ರೊ ಶನಿವಾರ ಘೋಷಿಸಿದೆ.
ಜೂನ್ 11ರಂದು ಫ್ಲಾರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್–9 ರಾಕೆಟ್ ಅನ್ನು ಉಡಾವಣೆ ಮಾಡಬೇಕಿತ್ತು. ಆದರೆ ರಾಕೆಟ್‌ನಲ್ಲಿ ಇಂಧನ ಸೋರುತ್ತಿದ್ದ ಕಾರಣ ಕೊನೆಯ ಕ್ಷಣದಲ್ಲಿ ಉಡಾವಣೆಯನ್ನು ರದ್ದು ಮಾಡಲಾಯಿತು. ಮೇ 29, ಜೂನ್ 8 ಮತ್ತು ಜೂನ್ 10ರಂದು ಸಹ ರಾಕೆಟ್ ಉಡಾವಣೆಗೆ ದಿನಾಂಕ ನಿಗದಿ ಮಾಡಿ ಆನಂತರ ಮುಂದೂಡಲಾಗಿತ್ತು.
‘ರಾಕೆಟ್‌ನಲ್ಲಿನ ಆಮ್ಲಜನಕ ಸೋರಿಕೆ ದೋಷವನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ ಎಂಬುದು ಇಸ್ರೊ, ಆ್ಯಕ್ಸಿಯಂ, ಸ್ಪೇಸ್ ಎಕ್ಸ್‌ನೊಂದಿಗೆ ನಡೆದ ಸಭೆಯಲ್ಲಿ ಖಚಿತವಾಗಿದೆ’ ಎಂದು ಇಸ್ರೊ ಹೇಳಿಕೆಯಲ್ಲಿ ತಿಳಿಸಿದೆ.
‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುತ್ತಿರುವ ಶುಕ್ಲಾ ಅವರೊಂದಿಗೆ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿಬೊರ್ ಕಾಪು ಹಾಗೂ ಪೋಲಂಡ್‌ನ ಸ್ಲಾವೋಸ್ ಯು.ವಿನ್ಸೀವ್ಸ್‌ಕಿ ಕೂಡ ಪಯಣಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.