ADVERTISEMENT

ಪ್ರಸ್ತಾವ ಸೋರಿಕೆ: ಸುಪ್ರೀಂ ಆದೇಶದ ಉಲ್ಲಂಘನೆ

ಮಧ್ಯಸ್ಥಿಕೆ ಸಮಿತಿ ಅಥವಾ ಪ್ರಕ್ರಿಯೆಯಲ್ಲಿ ಭಾಗಿಯಾದವರ ವಿರುದ್ಧ ಮುಸ್ಲಿಂ ಕಕ್ಷಿದಾರರ ಆರೋಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 12:37 IST
Last Updated 5 ನವೆಂಬರ್ 2019, 12:37 IST
   

ನವದೆಹಲಿ:ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸುವ ಪ್ರಸ್ತಾವವನ್ನು ಮುಸ್ಲಿಂ ಕಕ್ಷಿದಾರರು ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲದೆ, ಮಧ್ಯಸ್ಥಿಕೆ ಸಮಿತಿಯಲ್ಲಿದ್ದವರು ಅಥವಾ ಪ್ರಕ್ರಿಯೆಯಲ್ಲಿ ಭಾಗಿಯಾದವರು ಈ ಪ‍್ರಕ್ರಿಯೆಯ ಮಾಹಿತಿಯನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಸ್ಲಿಂ ಕಕ್ಷಿದಾರರ ಐವರು ವಕೀಲರು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಹೇಳಿಕೆ ಸಲ್ಲಿಸಿದ್ದಾರೆ. ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲು ಮತ್ತು ಹಕ್ಕು ಕೈಬಿಡಲು ಒಪ್ಪಿರುವುದಾಗಿ ಮಾಧ್ಯಮದಲ್ಲಿ ಪ್ರಕಟವಾಗುತ್ತಿರುವ ವರದಿಯನ್ನು ಈ ಹೇಳಿಕೆಯಲ್ಲಿ ಅವರು ತಿರಸ್ಕರಿಸಿದ್ದಾರೆ. ಮಧ್ಯಸ್ಥಿಕೆ ಪ್ರಕ್ರಿಯೆಯ ಬಗ್ಗೆಯೇ ತಮಗೆ ಒಪ್ಪಿಗೆ ಇಲ್ಲ ಎಂದು ಹೇಳಿದ್ದಾರೆ.

ನಿರ್ವಾಣಿ ಅಖಾಡದ ಧರ್ಮದಾಸ, ಸುನ್ನಿ ಕೇಂದ್ರ ವಕ್ಫ್‌ ಮಂಡಳಿಯ ಝಫರ್‌ ಫರೂಕಿ ಮತ್ತು ಹಿಂದೂ ಮಹಾಸಭಾದ ಚಕ್ರಪಾಣಿ ಮಾತ್ರ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಪ್‌.ಎಂ.ಐ. ಕಲೀಫುಲ್ಲಾ ನೇತೃತ್ವದ ಸಮಿತಿಯ ಮುಂದೆ ಹಾಜರಾಗಿದ್ದಾರೆ.

ADVERTISEMENT

ಹಿರಿಯ ವಕೀಲ ಶ್ರೀರಾಮ ಪಂಚು ಮತ್ತು ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌ ಅವರು ಮಧ್ಯಸ್ಥಿಕೆ ಸಮಿತಿಯ ಸದಸ್ಯರು.

ಮಧ್ಯಸ್ಥಿಕೆ ಸಮಿತಿಯೇ ನೇರವಾಗಿ ಮಾಧ್ಯಮಕ್ಕೆ ಮಾಹಿತಿ ಸೋರಿಕೆ ಮಾಡಿರಬೇಕು ಅಥವಾ ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದವರು ಸೋರಿಕೆ ಮಾಡಿರಬೇಕು. ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಗೋಪ್ಯವಾಗಿ ಇರಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಹಾಗಾಗಿ, ಇದು ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆ ಎಂದು ಈ ಐವರು ವಕೀಲರು ಆರೋಪಿಸಿದ್ದಾರೆ.

ನಿವೇಶನದ ಹಕ್ಕು ಕೈಬಿಡಲು ಸಿದ್ಧ ಎಂದು ಸುನ್ನಿ ವಕ್ಫ್‌ ಮಂಡಳಿ ಹೇಳಿರುವುದಾಗಿ ವರದಿಯಾಗಿರುವುದು ಆಘಾತ ತಂದಿದೆ ಎಂದು ಈ ವಕೀಲರು ಹೇಳಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಐ. ಕಲೀಫುಲ್ಲಾ ನೇತೃತ್ವದಲ್ಲಿ ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿ ಸುಪ್ರೀಂ ಕೋರ್ಟ್‌ ನೇಮಿಸಿತ್ತು. ಈ ಸಮಿತಿಯು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ವರದಿ ಸಲ್ಲಿಸಿದೆ.

ವಿವಾದಕ್ಕೆ ಹೊಸ ತಿರುವು
ಸಂಧಾನ ಸೂತ್ರದ ಭಾಗವಾಗಿ, ನಿವೇಶನ ವಿವಾದ ಪ್ರಕರಣದಿಂದ ಹಿಂದೆ ಸರಿಯಲು ಸಿದ್ಧ ಎಂದು ವಕ್ಫ್‌ ಮಂಡಳಿ ಒಪ್ಪಿದೆ ಎಂಬುದು ಈಗ ವಿವಾದದ ಕೇಂದ್ರವಾಗಿದೆ.ವಿವಾದದ ವಿಚಾರಣೆ ಇದೇ 16ರಂದು ಸುಪ್ರೀಂ ಕೋರ್ಟ್‌ನಲ್ಲಿ ಕೊನೆಗೊಂಡಿದೆ. ಪ್ರಕರಣದಿಂದ ಹಿಂದಕ್ಕೆ ಸರಿಯುವುದಾಗಿ ವಕ್ಫ್‌ ಮಂಡಳಿಯು ಪ್ರಸ್ತಾವ ಮುಂದಿಟ್ಟಿದೆ ಎಂಬ ವರದಿಯು ಅದೇ ದಿನ ಪ್ರಕಟವಾಗಿ ಪ್ರಕರಣವು ಹೊಸ ತಿರುವು ಪಡೆದಿತ್ತು.

ಪ್ರಾರ್ಥನಾ ಸ್ಥಳಗಳ ಕಾಯ್ದೆ 1991ರ ಅಡಿಯಲ್ಲಿ ಅಯೋಧ್ಯೆ ವಿವಾದ ಇತ್ಯರ್ಥದ ಪ್ರಸ್ತಾವ ಮುಂದಿರಿಸಲಾಗಿದೆ. ಈ ಕಾಯ್ದೆ ಪ್ರಕಾರ, 1947ಕ್ಕೆ ಮೊದಲು ದೇವಾಲಯಗಳನ್ನು ಧ್ವಂಸ ಮಾಡಿ ನಿರ್ಮಿಸಲಾದ ಯಾವುದೇ ಮಸೀದಿ ಅಥವಾ ಪ್ರಾರ್ಥನಾ ಸ್ಥಳದ ವಿವಾದವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ಇಲ್ಲ. ಅಯೋಧ್ಯೆ ನಿವೇಶನ ವಿವಾದವನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ.

‘ಮಧ್ಯಸ್ಥಿಕೆ ಮಾತಿಗೆ ಬೆಲೆಯಿಲ್ಲ’: ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಪೂರ್ಣಗೊಂಡಿದೆ. ಹಾಗಾಗಿ, ಮಾಧ್ಯಮದಲ್ಲಿ ಪ್ರಸ್ತಾಪವಾಗುತ್ತಿರುವ ಮಧ್ಯಸ್ಥಿಕೆ ವರದಿಗೆ ಯಾವುದೇ ಬೆಲೆ ಇಲ್ಲ ಎಂದು ಈ ಪ್ರಕರಣದಲ್ಲಿ ವಾದಿಸಿದ್ದ ವಕೀಲರೊಬ್ಬರು ಹೇಳಿದ್ದಾರೆ.

ರಾಮ ಮಂದಿರ ಬಳಿಕ ಮುಂದಿನ ಗುರಿ ಕಾಶಿ ಮತ್ತು ಮಥುರಾ
ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಸ್ಥಳ ವಿವಾದ ಕುರಿತು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಹೊರಬೀಳುವ ಮುನ್ನವೇ ಸ್ವಾಮೀಜಿಗಳ ಒಕ್ಕೂಟ, ‘ಕಾಶಿ ಮತ್ತು ಮಥುರಾ ನಮ್ಮ ಮುಂದಿನ ಗುರಿ’ ಎಂದು ಘೋಷಿಸಿದೆ.

ಸ್ವಾಮೀಜಿಗಳ ಒಕ್ಕೂಟವಾಗಿರುವ ಅಖಿಲ ಭಾರತ ಅಖರ ಪರಿಷತ್ (ಎಐಎಪಿ) ಗುರುವಾರ ಈ ಕುರಿತು ಹೇಳಿಕೆ ನೀಡಿದೆ ‘ವಾರಾಣಸಿಯಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನ, ಮಥುರಾದಲ್ಲಿನ ಶ್ರೀಕೃಷ್ಣ ಜನ್ಮಭೂಮಿ ದೇಗುಲಕ್ಕೆ ಹೊಂದಿಕೊಂಡಿರುವ ಮಸೀದಿಗಳ ತೆರವಿಗೆ ಆದ್ಯತೆ ನೀಡಲಾಗುವುದು. ರಾಮಮಂದಿರ ನಿರ್ಮಾಣದ ನಂತರ ಇದಕ್ಕೆ ಚಾಲನೆ ಸಿಗಲಿದೆ’ ಎಂದಿದೆ.

‘ಬಾಬರಿ ಮಸೀದಿ ಸ್ಥಳದ ಬಳಿ ಇರುವಂತೆಯೇ ಕಾಶಿ ಮತ್ತು ಮಥುರಾಗಳಲ್ಲೂ ಮಸೀದಿಯನ್ನು ನಿರ್ಮಾಣ ಮಾಡಲು ದೇಗುಲಗಳನ್ನು ನೆಲಸಮಗೊಳಿಸಲಾಗಿತ್ತು’ ಎಂದು ಎಐಎಪಿ ಅಧ್ಯಕ್ಷ ಮಹಂತ್‌ ನರೇಂದ್ರ ಗಿರಿ ಪ್ರತಿಪಾದಿಸಿದರು.

‘ಸದ್ಯ, ಉತ್ತರ ಪ್ರದೇಶ ಹಾಗೂ ಕೇಂದ್ರದಲ್ಲಿ ‘ಹಿಂದೂಪರ’ ಸರ್ಕಾರಗಳಿವೆ. ಹೀಗಾಗಿ, ಗುರಿ ಸಾಧನೆ ಕಷ್ಟವಲ್ಲ. ರಾಮಮಂದಿರದಂತೆಯೇ ಕಾಶಿ, ಮಥುರಾವನ್ನು ವಿಶ್ವದಾದ್ಯಂತ ಹಿಂದೂಗಳು ಪೂಜ್ಯಭಾವದಿಂದ ನೋಡುತ್ತಾರೆ’ ಎಂದರು.

ಆಶ್ಚರ್ಯದ ಸಂಗತಿಯೆಂದರೆ ಆಯೋಧ್ಯೆ ಭೂ ವಿವಾದದಲ್ಲಿ ಪ್ರಮುಖ ಅರ್ಜಿದಾರರಾಗಿರುವ ಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿ ಸುಪ್ರೀಂ ಕೋರ್ಟ್‌ ನೇಮಿಸಿದ್ದ ಮಧ್ಯಸ್ಥಿಕೆ ಸಮಿತಿಗೆ ಸಲ್ಲಿಸಿದ ಮನವಿಯಲ್ಲಿ ಕಾಶಿ ಮತ್ತು ಮಥುರಾದಲ್ಲಿರುವ ಮಸೀದಿಗಳ ಮೇಲೆ ತಮ್ಮ ಹಕ್ಕು ಚಲಾಯಿಸಬಾರದು ಎಂಬ ಪೂರ್ವಷರತ್ತು ವಿಧಿಸಿರುವುದು.

ಆದರೆ, ಇದಕ್ಕೆ ಸ್ಪಷ್ಟನೆ ಎಂಬಂತೆ ನರೇಂದ್ರ ಗಿರಿ ಅವರು, ಕಾಶಿ ಮತ್ತು ಮಥುರಾದಲ್ಲಿ ಹಿಂದೂಗಳ ಹಕ್ಕಿಗಾಗಿ ಪ್ರತಿಪಾದನೆ ಮಾಡುವುದನ್ನು ಯಾವುದೇ ಸಂದರ್ಭದಲ್ಲಿಯೂ ಕೈಬಿಡಲಾಗದು ಎಂದು ಹೇಳಿದ್ದಾರೆ.

ಬಿಜೆಪಿ ಹಿರಿಯ ನಾಯಕ ವಿನಯ ಕಟಿಯಾರ್‌ ಅವರೂ, ‘ಕಾಶಿ ಮತ್ತು ಮಥುರಾ ಹಿಂದೂಗಳಿಗೆ ಸೇರಿದ್ದಾಗಿದೆ’ ಎಂದು ದನಿಗೂಡಿಸಿದ್ದಾರೆ. ಈ ಎರಡೂ ನಗರಗಳಲ್ಲಿಯೂ ಪ್ರಮುಖ ದೇಗುಲಗಳಿಗೆ ಹೊಂದಿಕೊಂಡಂತೆ ಮಸೀದಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.