ADVERTISEMENT

ಅಯೋಧ್ಯೆ: ಗಣರಾಜ್ಯೋತ್ಸವ ದಿನದಂದು ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ

ಪಿಟಿಐ
Published 26 ಜನವರಿ 2021, 16:18 IST
Last Updated 26 ಜನವರಿ 2021, 16:18 IST
ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು–ಪಿಟಿಐ ಚಿತ್ರ
ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು–ಪಿಟಿಐ ಚಿತ್ರ   

ಅಯೋಧ್ಯೆ: ರಾಮ ಜನ್ಮಭೂಮಿಯಿಂದ ಸುಮಾರು 24 ಕಿ.ಮೀ.ದೂರವಿರುವ ಧನ್ನೀಪುರ್‌ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ಗಣರಾಜ್ಯೋತ್ಸವದ ದಿನವಾದ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.

ಗಣರಾಜ್ಯ ದಿನದ ಪ್ರಯುಕ್ತಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿಯ ಮುಖ್ಯಸ್ಥ ಜುಫರ್‌ ಅಹಮದ್‌ ಫಾರೂಕಿ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಂಡಳಿಯ ಸದಸ್ಯರು ಒಂಬತ್ತು ಗಿಡಗಳನ್ನು ನೆಟ್ಟರು.

ಮಸೀದಿ ನಿರ್ಮಾಣದ ಮೇಲ್ವಿಚಾರಣೆಗೆ ಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿಯುಇಂಡೊ ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ ರಚಿಸಿತ್ತು. ಈ ಟ್ರಸ್ಟ್‌ ಅಸ್ತಿತ್ವಕ್ಕೆ ಬಂದು ಸರಿಯಾಗಿ ಆರು ತಿಂಗಳ ನಂತರ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು.

ADVERTISEMENT

ಅವಧ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆರ್‌.ಕೆ.ಸಿಂಗ್‌ ಹಾಗೂ ಅವರ ಪತ್ನಿ ಡಾ.ಸುನಿತಾ ಸೆಂಗರ್‌ ಅವರು ಮಸೀದಿ ನಿರ್ಮಾಣಕ್ಕೆ ₹22 ಸಾವಿರ ದೇಣಿಗೆ ನೀಡಿದರು.

‘ಉದ್ದೇಶಿತ ಮಸೀದಿಯು ಬಾಬ್ರಿ ಮಸೀದಿಗಿಂತಲೂ ದೊಡ್ಡದಾಗಿರಲಿದ್ದು ಅದರ ವಿನ್ಯಾಸವೂ ವಿಭಿನ್ನವಾಗಿರಲಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿಗೆ ನೀಡಲಾಗಿರುವ ಐದು ಎಕರೆ ಜಾಗದಲ್ಲಿ ಅತ್ಯಾಧುನಿಕ ಆಸ್ಪತ್ರೆಯೂ ತಲೆ ಎತ್ತಲಿದೆ. ಇದು 300 ಹಾಸಿಗೆಗಳನ್ನೊಳಗೊಂಡ ವಿಶೇಷ ಘಟಕವನ್ನು ಹೊಂದಿರಲಿದೆ. ಈ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಇಂಡೊ ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ನ ಕಾರ್ಯದರ್ಶಿ ಅಥರ್‌ ಹುಸೇನ್‌ ಹೇಳಿದ್ದಾರೆ.

‘ನಮ್ಮ ಸಂವಿಧಾನವು ಬಹುತ್ವದ ನೆಲೆಯಲ್ಲಿ ಸ್ಥಾಪಿತಗೊಂಡಿದೆ. ಈ ಮಸೀದಿಯು ಬಹುತ್ವವನ್ನು ಪ್ರತಿಪಾದಿಸಲಿದೆ. ಹೀಗಾಗಿ ಗಣರಾಜ್ಯೋತ್ಸವದಂದೇ ಅಡಿಗಲ್ಲು ಹಾಕಲು ನಿರ್ಧರಿಸಲಾಗಿತ್ತು’ ಎಂದೂ ಅವರು ನುಡಿದಿದ್ದಾರೆ.

ಈ ಮಸೀದಿಗೆ 1857ರಲ್ಲಿ ಬ್ರಿಟೀಷರ ಆಳ್ವಿಕೆಯ ವಿರುದ್ಧ ನಡೆದ ಬಂಡಾಯದ ಹೋರಾಟಗಾರರಲ್ಲಿ ಒಬ್ಬರಾದ ಮೌಲ್ವಿ ಅಹ್ಮದುಲ್ಲಾ ಷಾ ಅವರ ಹೆಸರಿಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.