ADVERTISEMENT

ಇತಿಹಾಸದ ಬೆಳಕಿನಲ್ಲಿ ಅಯೋಧ್ಯಾ ನಗರಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:32 IST
Last Updated 9 ನವೆಂಬರ್ 2019, 19:32 IST
ಅಯೋಧ್ಯೆ ಪಟ್ಟಣ–ರಾಯಿಟರ್ಸ್ ಚಿತ್ರ
ಅಯೋಧ್ಯೆ ಪಟ್ಟಣ–ರಾಯಿಟರ್ಸ್ ಚಿತ್ರ   

ಹಿಂದೂಗಳ ಪವಿತ್ರ ನಗರಗಳ ಪೈಕಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಪಟ್ಟಣ ಅಯೋಧ್ಯೆ. ರಾಮಾಯಣದ ಜತೆ ಹೊಂದಿರುವ ನಿಕಟ ಸಂಬಂಧ, ರಾಮನ ಜನ್ಮಸ್ಥಳ ಎಂಬ ನಂಬಿಕೆಯಿಂದ ಅದು ಪೂಜನೀಯವೂ ಎನಿಸಿಕೊಂಡಿದೆ. ಅಯೋಧ್ಯೆ ಪಟ್ಟಣ ಸಮೃದ್ಧ ಹಾಗೂ ಸುಸಜ್ಜಿತವಾಗಿದ್ದು, ಬೃಹತ್ ಜನವಸತಿ ಇಲ್ಲಿ ನೆಲೆಸಿತ್ತು ಎಂದು ಇತಿಹಾಸ ಹೇಳುತ್ತದೆ.

ಇತಿಹಾಸದ ಪ್ರಕಾರ, ಅಯೋಧ್ಯೆಯು ಆರಂಭದಲ್ಲಿ ಕೋಸಲ ರಾಜ್ಯದ ರಾಜಧಾನಿಯಾಗಿತ್ತು. ಗೌತಮ ಬುದ್ಧ ಕೆಲಕಾಲ ನೆಲೆಸಿದ್ದ ಎಂದು ಹೇಳಲಾಗುವ ಸಾಕೇತ್‌ ಪಟ್ಟಣದ ಜತೆ ಅಯೋಧ್ಯೆ ಗುರುತಿಸಿಕೊಂಡಿದೆ ಎಂಬುದನ್ನು ವಿದ್ವಾಂಸರು ಒಪ್ಪುತ್ತಾರೆ. ಇದು ಬೌದ್ಧ ಕೇಂದ್ರವೂ ಆಗಿತ್ತು ಎಂಬುದಕ್ಕೆ ಚೀನಾದ ಬೌದ್ಧ ಭಿಕ್ಕು ಫಾಕ್ಸಿಯಾನ್‌ನ ಹೇಳಿಕೆ ಪುಷ್ಟಿ ನೀಡುತ್ತದೆ. ‘ಪಟ್ಟಣದಲ್ಲಿ 100ಕ್ಕೂ ಹೆಚ್ಚು ವಿಹಾರ, ಸ್ತೂಪ ಸೇರಿದಂತೆ ಹಲವು ಸ್ಮಾರಕಗಳು ಇದ್ದವು’ ಎಂದು ಆತ ಉಲ್ಲೇಖಿಸಿದ್ದ.

ಕನೌಜ್ ಸಾಮ್ರಾಜ್ಯ ಜನ್ಮ ತಳೆದಿದ್ದು ಅಯೋಧ್ಯೆಯಲ್ಲಿ. ಬಳಿಕ ಅದನ್ನು ಅವಧ್ ಎಂದು ಕರೆಯಲಾಯಿತು. ಈ ಪ್ರದೇಶವು ಮುಂದಿನ ದಿನಗಳಲ್ಲಿ ದೆಹಲಿ ಸುಲ್ತಾನರು, ಜೌನ್‌ಪುರ ಸಾಮ್ರಾಜ್ಯ ಹಾಗೂ 16ನೇ ಶತಮಾನದಲ್ಲಿ ಮೊಘಲರ ಚಕ್ರಾಧಿಪತ್ಯಕ್ಕೆ ಒಳಪಟ್ಟಿತು. ಅವಧ್ ಸ್ವಾತಂತ್ರ್ಯ ಘೋಷಿಸಿಕೊಂಡರೂ, 1764ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧೀನದಲ್ಲಿ ಇರಬೇಕಾಯಿತು. ಬಳಿಕ 1856ರಲ್ಲಿ ಬ್ರಿಟಿಷರು ಇದನ್ನು ವಶಪಡಿಸಿಕೊಂಡರು. 1877ರಲ್ಲಿ ಆಗ್ರಾ ಪ್ರೆಸಿಡೆನ್ಸಿಯಲ್ಲಿ ಸೇರಿ ವಾಯವ್ಯ ಪ್ರಾಂತ್ಯ ರಚನೆಯಾಯಿತು. ಬಳಿಕ ಆಗ್ರಾ ಯುನೈಟೆಡ್ ಪ್ರಾವಿನ್ಸ್‌ ರಚನೆಯಾಯಿತು. ಇದೇ ಈಗ ಉತ್ತರ ಪ್ರದೇಶ ರಾಜ್ಯವಾಗಿದೆ.

ADVERTISEMENT

ಅತಿಪುರಾತನ ಇತಿಹಾಸ ಹೊಂದಿರುವ ನಗರದಲ್ಲಿ ಪುರಾತನ ಸ್ಮಾರಕಗಳೂ ಇವೆ. ರಾಮನ ಜನ್ಮಸ್ಥಳ ಎಂದು ಸಾಂಪ್ರದಾಯಿಕವಾಗಿ ನಂಬಲಾಗುತ್ತಿರುವ ಸ್ಥಳದಲ್ಲಿ, ಮೊಘಲ್ ಚಕ್ರವರ್ತಿ ಬಾಬರ್ 16ನೇ ಶತಮಾನದ ಆರಂಭದಲ್ಲಿ ‘ಬಾಬರಿ ಮಸೀದಿ’ ನಿರ್ಮಾಣ ಮಾಡಿದ. ಸ್ಥಳದ ಮಹತ್ವದಿಂದಾಗಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಈ ಜಾಗವು ಆಗಾಗ್ಗೆ ವಿವಾದದ ವಸ್ತುವಾಗಿದೆ.

ಡಿಸೆಂಬರ್ 6, 1992ರಲ್ಲಿ ಹಿಂದುತ್ವವಾದಿಗಳಿಂದ ಮೂರಂತಸ್ತಿನ ಬಾಬರಿ ಮಸೀದಿ ನೆಲಕಚ್ಚಿತು. ಈ ಘಟನೆಯ ಬಳಿಕ ದೇಶದಾದ್ಯಂತ ವ್ಯಾಪಿಸಿದ ಗಲಭೆಯಿಂದ 2000ಕ್ಕೂ ಹೆಚ್ಚು ಜನರು ಮೃತಪಟ್ಟರು. ನಿವೃತ್ತ ನ್ಯಾಯಮೂರ್ತಿ ಮನಮೋಹನ್ ಸಿಂಗ್ ಲಿಬರಾನ್ ನೇತೃತ್ವದಲ್ಲಿ ರಚಿಸಿದ ತನಿಖಾ ಆಯೋಗ 17 ವರ್ಷಗಳ ಬಳಿಕ ವರದಿ ಸಲ್ಲಿಸಿತು. ಹಿಂದೂಪರ ಭಾರತೀಯ ಜನತಾ ಪಾರ್ಟಿಯ ಪ್ರಮುಖ ಮುಖಂಡರತ್ತ ಆಯೋಗ ಬೊಟ್ಟು ಮಾಡಿತು.

4.5 ಲಕ್ಷ:ಅಯೋಧ್ಯೆ ನಗರದ ಜನಸಂಖ್ಯೆ(2011ರ ಗಣತಿ)
80ಚದರ ಕಿಲೋಮೀಟರ್:ಅಯೋಧ್ಯೆ ನಗರದ ವ್ಯಾಪ್ತಿ

ಹೀಗಿದೆ ಅಯೋಧ್ಯೆ...
* ಸರಯೂ ನದಿಯ ತಟದಲ್ಲಿ ಅಯೋಧ್ಯೆ ನೆಲೆಯಾಗಿದೆ
* ‘ಅಯೋಧ್ಯೆಯು ದೇವರಿಂದ ನಿರ್ಮಾಣವಾಗಿದೆ’ ಎಂದು ಅಥರ್ವವೇದ ಉಲ್ಲೇಖಿಸುತ್ತದೆ
* ರಾಮಾಯಣ, ಹಿಂದೂ ಪುರಾಣಗಳಲ್ಲಿ ಅಯೋಧ್ಯೆಯ ಉಲ್ಲೇಖವಿದೆ
* ಯಾತ್ರಿಕರ ಪ್ರಮುಖ ತಾಣ; ರಾಮನ ಜನ್ಮಸ್ಥಳ ಎಂಬ ನಂಬಿಕೆ
* 7 ಸಾವಿರ ಮಂದಿರಗಳಿದ್ದವು ಎಂದು ಇತಿಹಾಸ ಹೇಳುತ್ತದೆ. 100ಕ್ಕೂ ಹೆಚ್ಚು ದೇಗುಲಗಳ ಕುರುಹುಗಳಿವೆ
* ಬೌದ್ಧ, ಜೈನ ಪಂಥದ ಹಲವು ಸ್ಮಾರಕಗಳು ಇವೆ
* ಹನುಮಗಢಿ, ಲಕ್ಷ್ಮಣ ಘಾಟ್, ಕಾಲಾ ರಾಮ ಮಂದಿರ, ಕನಕ ಭವನ ಇಲ್ಲಿನ ಕೆಲವು ಸ್ಮಾರಕಗಳು

ಆಧಾರ: ಎನ್‌ಸೈಕ್ಲೊಪೀಡಿಯಾ ಬ್ರಿಟಾನಿಕಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.