ADVERTISEMENT

ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿದ ಅಲಹಾಬಾದ್ ಹೈಕೋರ್ಟ್‌ ತೀರ್ಪಿನಲ್ಲೇನಿತ್ತು?

ಅಯೋಧ್ಯೆ ತೀರ್ಪು

ಏಜೆನ್ಸೀಸ್
Published 9 ನವೆಂಬರ್ 2019, 11:32 IST
Last Updated 9 ನವೆಂಬರ್ 2019, 11:32 IST
ಅಲಹಾಬಾದ್ ಹೈಕೋರ್ಟ್ (ಪಿಟಿಐ ಚಿತ್ರ)
ಅಲಹಾಬಾದ್ ಹೈಕೋರ್ಟ್ (ಪಿಟಿಐ ಚಿತ್ರ)   

ನವದೆಹಲಿ:ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿಗೆ ಸಂಬಂಧಿಸಿದ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್‌, 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅಸಿಂಧು ಎಂದಿದೆ.‌

ಅಯೋಧ್ಯೆಯಲ್ಲಿರುವ 15ನೇ ಶತಮಾನದ ಬಾಬರಿ ಮಸೀದಿಯನ್ನು ಕರಸೇವಕರು 1992ರಲ್ಲಿ ನೆಲಸಮಗೊಳಿಸಿದ ನಂತರ, ವಿವಾದ ಕೋರ್ಟ್‌ ಮೆಟ್ಟಿಲೇರಿತ್ತು. ಕೊನೆಗೆ ವಿವಾದಿತ ಪ್ರದೇಶಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಡೆಯಿತು.

ಒಟ್ಟು2.77 ಎಕರೆ ಜಾಗವು ತಮಗೆ ಸೇರಿದ್ದು ಎಂದು ಸುನ್ನಿ ವಕ್ಫ್‌ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ಸಂಘಟನೆಗಳು ವಾದಿಸಿದವು. ಆ ಜಾಗದಲ್ಲಿ ದೇಗುಲವನ್ನು ನಾಶಪಡಿಸಿ ಮಸೀದಿ ನಿರ್ಮಿಸಲಾಗಿದೆ. ಅಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಹಿಂದು ಸಂಘಟನೆಗಳ ವಕೀಲರು ವಾದಿಸಿದ್ದರು. ಆದರೆ,ದೇವಾಲಯವನ್ನು ಧ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಪ್ರಕರಣದ ಮುಸ್ಲಿಂ ಕಕ್ಷಿದಾರರು ವಾದಿಸಿದ್ದರು.

ಕೊನೆಗೆ, ವಿವಾದಾತ್ಮಕ ನಿವೇಶನವನ್ನು ಸುನ್ನಿ ವಕ್ಫ್‌ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾಗೆಸಮಾನವಾಗಿ ಹಂಚಿಕೆ ಮಾಡುವಂತೆ ಆದೇಶಿಸಿ2010ರ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಮೂರೂ ಸಂಘಟನೆಗಳಿಗೆ ತಲಾ 15 ಸಾವಿರ ಚದರ ಅಡಿಯಷ್ಟು ಜಾಗವನ್ನು ನೀಡುವಂತೆ ನಿರ್ದೇಶಿಸಲಾಗಿತ್ತು.ಹೈಕೋರ್ಟ್‌ನ ತ್ರಿಸದಸ್ಯ ಪೀಠವು 2:1 ಬಹುಮತದಲ್ಲಿ ಈ ತೀರ್ಪು ಪ್ರಕಟಿಸಿತ್ತು.

ನ್ಯಾಯಮೂರ್ತಿಗಳಾದ ಸಿಬ್‌ಘತ್ ಉಲ್ಲಾ ಖಾನ್, ಸುಧೀರ್ ಅಗರ್‌ವಾಲ್ ಮತ್ತು ಧರಮ್ ವೀರ್ ಶರ್ಮಾ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿದ್ದರು.

ಇವರು ನೀಡಿದ್ದತೀರ್ಪನ್ನು ಪ್ರಶ್ನಿಸಿ ಹಿಂದು ಮತ್ತು ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದವು. ಪರಿಣಾಮವಾಗಿ 2011ರ ಮೇ 9ರಂದು ಅಲಹಾಬಾದ್ ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ಹೊರಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.