ADVERTISEMENT

ಸುಪ್ರೀಂ ಕೋರ್ಟ್‌ನಿಂದ ಸಮತೋಲಿತ ತೀರ್ಪು: ನಿರ್ಗಮಿತ ಸಿಜೆಐ ಗವಾಯಿ

ಮಸೂದೆಗಳಿಗೆ ಅಂಕಿತ ಹಾಕುವ ವಿಚಾರ ಕುರಿತು ನಿರ್ಗಮಿತ ಸಿಜೆಐ ಗವಾಯಿ ಪ್ರತಿಕ್ರಿಯೆ

ಪಿಟಿಐ
Published 23 ನವೆಂಬರ್ 2025, 16:01 IST
Last Updated 23 ನವೆಂಬರ್ 2025, 16:01 IST
ಬಿ.ಆರ್‌.ಗವಾಯಿ
ಬಿ.ಆರ್‌.ಗವಾಯಿ   

ನವದೆಹಲಿ: ‘ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರು ಅಂಕಿತ ಹಾಕಲು ಕಾಲಮಿತಿ ನಿಗದಿ ಮಾಡುವ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಸಮತೋಲಿತ ತೀರ್ಪು ನೀಡಿದೆ’ ಎಂದು ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಭಾನುವಾರ ಹೇಳಿದ್ದಾರೆ.

‘ಮಸೂದೆಗಳಿಗೆ ಅಂಕಿತ ಹಾಕುವ ವಿಚಾರದಲ್ಲಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರಿಗೆ ಕಾಲಮಿತಿಯನ್ನು ಸುಪ್ರೀಂ ಕೋರ್ಟ್‌ ನಿಗದಿ ಮಾಡಿಲ್ಲ. ಇದಕ್ಕೆ ಸಂವಿಧಾನವೂ ಅವಕಾಶ ನೀಡುವುದಿಲ್ಲ. ಅದೇ ರೀತಿ, ರಾಜ್ಯಪಾಲರು ಮಸೂದೆಗಳಿಗೆ ಅಂಕಿತ ಹಾಕದೇ ಅನಿರ್ದಿಷ್ಟಾವಧಿವರೆಗೆ ಸುಮ್ಮನೆ ಕೂರುವಂತೆಯೂ ಇಲ್ಲ ಎಂಬುದನ್ನು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ’ ಎಂದು ಹೇಳಿದ್ದಾರೆ.

ಭಾನುವಾರ ನಿವೃತ್ತರಾಗಿರುವ ಅವರು, ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಶುಕ್ರವಾರ ಅವರ ಕೆಲಸದ ಕೊನೆಯ ದಿನವಾಗಿತ್ತು.

ADVERTISEMENT

‘ಸಂವಿಧಾನವು ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ವಿಭಜನೆ ಕುರಿತು ಹೇಳಿದೆ. ಆದರೆ, ಕಾಲಮಿತಿಯನ್ನು ಉಲ್ಲೇಖ ಮಾಡದ ಕಡೆಗಳಲ್ಲಿ, ಅದನ್ನು ಗುರುತಿಸಿ ಜಾರಿಗೊಳಿಸುವುದಕ್ಕೆ ಸಂವಿಧಾನ ಅವಕಾಶ ನೀಡಿಲ್ಲ’ ಎಂದು ಅವರು ಹೇಳಿದ್ದಾರೆ.

‘ರಾಜ್ಯಪಾಲರಿಗೆ ಗಡುವು ವಿಧಿಸುವ ಅವಕಾಶವನ್ನು ಸುಪ್ರೀಂ ಕೋರ್ಟ್‌ ದುರ್ಬಲಗೊಳಿಸಿದೆ ಎಂಬ ಟೀಕೆಗಳು ವ್ಯಕ್ತವಾಗಿವೆಯಲ್ಲ’ ಎಂಬ ಪ್ರಶ್ನೆಗೆ, ‘ಕಾಲಮಿತಿ ವಿಧಿಸುವುದಕ್ಕೆ ಸಂವಿಧಾನ ಅವಕಾಶ ನೀಡುವುದಿಲ್ಲ. ಆದರೆ, ರಾಜ್ಯಪಾಲರು ಅಂಕಿತ ಹಾಕುವ ವಿಚಾರದಲ್ಲಿ ಅನಿರ್ದಿಷ್ಟ ಅವಧಿಗೆ ಸುಮ್ಮನೆ ಕೂರುವಂತಿಲ್ಲ ಎಂದು ಹೇಳಿದ್ದೇವೆ. ವಿಪರೀತ ವಿಳಂಬ ಕಂಡಬಂದ ಸಂದರ್ಭಗಳಲ್ಲಿ ನ್ಯಾಯಾಲಯವು ಪರಿಶೀಲನೆ ನಡೆಸುವುದಕ್ಕೆ ಅವಕಾಶ ಇದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ’ ಎಂದು ಉತ್ತರಿಸಿದರು.

ನಕಾರ: ನ್ಯಾಯಮೂರ್ತಿ ಯಶವಂತ ವರ್ಮಾ ಅವರ ವಿರುದ್ಧದ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಲು ಸಿಜೆಐ ಗವಾಯಿ ನಿರಾಕರಿಸಿದರು.

‘ಈ ವಿಷಯವು ಸಂಸದೀಯ ಸಮಿತಿ ಮುಂದಿರುವ ಕಾರಣ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ನ್ಯಾಯಾಂಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಾರ್ವಜನಿಕರಲ್ಲಿ ನ್ಯಾಯಾಂಗದ ಕುರಿತು ನಂಬಿಕೆ ಉಳಿಸಿಕೊಳ್ಳಲು ಇದು ಅಗತ್ಯ’ ಎಂದರು.

ಬಿ.ಆರ್‌.ಗವಾಯಿ
ಪ್ರಸ್ತುತ ದಿನಗಳಲ್ಲಿ ನ್ಯಾಯಾಧೀಶರೊಬ್ಬರು ಸರ್ಕಾರದ ವಿರುದ್ಧ ತೀರ್ಪು ನೀಡಿದಾಗ ಮಾತ್ರ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದು ಸರಿಯಲ್ಲ
ಬಿ.ಆರ್.ಗವಾಯಿ ನಿರ್ಗಮಿತ ಸಿಜೆಐ

ಕೊಲಿಜಿಯಂ ವ್ಯವಸ್ಥೆಯ ಸಮರ್ಥನೆ

ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಸುಪ್ರೀಂ ಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನ್ಯಾಯಾಂಗವು ಸ್ವತಂತ್ರವಾಗಿ ಕಾರ್ಯನಿರ್ಹಿಸುವುದಕ್ಕೆ ಕೊಲಿಜಿಯಂ ವ್ಯವಸ್ಥೆ ನೆರವಾಗುತ್ತದೆ’ ಎಂದಿದ್ದಾರೆ.

‘ಯಾವ ವ್ಯವಸ್ಥೆ ಕೂಡ ಪರಿಪೂರ್ಣವಲ್ಲ. ವಕೀಲರು ನ್ಯಾಯಮೂರ್ತಿಗಳ ಮುಂದೆ ವಾದ ಮಂಡಿಸುತ್ತಾರೆಯೇ ಹೊರತು ಪ್ರಧಾನಿ ಅಥವಾ ಕಾನೂನು ಸಚಿವರ ಮುಂದೆ ಅಲ್ಲ. ಹೀಗಾಗಿ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ವ್ಯವಸ್ಥೆ ಅಗತ್ಯ’ ಎಂದರು. ‘ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಕಲ್ಪಿಸುವ ವೇಳೆ ಕೆನೆಪದರ ನೀತಿಯನ್ನು ಅನ್ವಯಿಸಬೇಕು’ ಎಂದು ಪ್ರತಿಪಾದಿಸಿದ ಅವರು ‘ನನ್ನ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಮಹಿಳಾ ನ್ಯಾಯಮೂರ್ತಿಗಳನ್ನು ನೇಮಕ ಮಾಡದೇ ಇರುವುದಕ್ಕೆ ವಿಷಾದ ಇದೆ’ ಎಂದು ಹೇಳಿದರು. ‘ನಿವೃತ್ತಿ ನಂತರ ಸರ್ಕಾರ ನೀಡುವ ಯಾವುದೇ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಅಧಿಕಾರ ಸ್ವೀಕರಿಸಿದ ದಿನವೇ ನಾನು ಹೇಳಿದ್ದೆ. ಈಗ ನಿವೃತ್ತನಾಗಿರುವೆ. ಮುಂದಿನ 9–10 ದಿನಗಳ ವಿಶ್ರಾಂತಿ ಬಳಿಕ ಹೊಸ ಇನಿಂಗ್ಸ್ ಆರಂಭವಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.