ADVERTISEMENT

ಮತ ಹಾಕಿದ್ರೆ ಬೆರಳು ಕತ್ತರಿಸ್ತೀವಿ ಅಂತಾರೆ ಮಾವೋವಾದಿಗಳು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 6:52 IST
Last Updated 4 ನವೆಂಬರ್ 2018, 6:52 IST
ಛತ್ತೀಸಗಡದಲ್ಲಿ ಮಾವೋವಾದಿಗಳು
ಛತ್ತೀಸಗಡದಲ್ಲಿ ಮಾವೋವಾದಿಗಳು   

ರಾಯ್‌ಪುರ್: ಛತ್ತೀಸಗಡದ ಮಾವೋ ಪ್ರಭಾವಿತ ಪ್ರದೇಶ ಬಸ್ತಾರ್‌ ವಲಯದಲ್ಲಿ ಮತ ಚಲಾಯಿಸುವುದು ಜೀವವನ್ನೇ ಪಣಕ್ಕಿಟ್ಟು ಮಾಡಬೇಕಾದ ಕೆಲಸ. ಮತ ಹಾಕಿ ಜೀವದ ಮೇಲೆ ಏಕೆ ತಂದುಕೊಳ್ಳಬೇಕು ಎಂದುಕೊಳ್ಳುವ ಇಲ್ಲಿನ ಗ್ರಾಮಸ್ಥರು ಆ ಉಸಾಬರಿಗೇ ಹೋಗದೆ ಸುಮ್ಮನಾಗುತ್ತಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ದಕ್ಷಿಣ ಬಸ್ತಾರ್‌ನ ಮುಕ್ರಂ ವಲಯದಲ್ಲಿರುವ 300ಕ್ಕೂ ಹೆಚ್ಚು ಮತದಾರರಿಗೆ ಮತ ಚಲಾಯಿಸುವ ಅವಕಾಶ ಸಿಗಲಾರದು. ‘ನೀವು ಮತ ಹಾಕಿದರೆ ನಿಮ್ಮ ಬೆರಳುಗಳನ್ನು ಕತ್ತರಿಸಲಾಗುವುದು’ ಎಂದು ಈಗಾಗಲೇ ಮಾವೋವಾದಿಗಳು ಮತದಾರರಿಗೆ ಬೆದರಿಕೆಯೊಡ್ಡಿದ್ದಾರೆ.

ಮುಕ್ರಂ ಸೇರಿದಂತೆ ದಕ್ಷಿಣ ಬಸ್ತಾರ್‌ನ 13 ಹಳ್ಳಿಗಳಲ್ಲಿ ಯಾರೊಬ್ಬರೂ ಹತ್ತಾರು ವರ್ಷಗಳಿಂದ ಮತ ಚಲಾಯಿಸಿಲ್ಲ. ಬಂಡುಕೋರರು ಹಳ್ಳಿಗಳ ಒಳಗೆ ಮತ್ತು ಸುತ್ತಮುತ್ತ ಮತಚಲಾಯಿಸಿದರೆ ಬೆರಳು ಕತ್ತರಿಸುತ್ತೇವೆ ಎಂದು ಎಚ್ಚರಿಸುವ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ‘ಬೆರಳುಗಳನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಹೀಗಾಗಿ ಮತ ಹಾಕುವ ಉಸಾಬರಿಯೇ ನಮಗೆ ಬೇಡ’ ಎಂಬ ಗ್ರಾಮಸ್ಥರೊಬ್ಬರ ಹೇಳಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ನಕ್ಸಲ್ ನಾಯಕರು ಗ್ರಾಮಗಳಲ್ಲಿ ಸಭೆಗಳನ್ನು ನಡೆಸಿ, ‘ಮತ ಚಲಾಯಿಸಿದರೆತಕ್ಕ ಶಾಸ್ತಿ ಅನುಭವಿಸುತ್ತೀರಿ’ ಎಂದು ಹೆದರಿಸಿದ್ದಾರೆ. ಹೀಗಾಗಿಯೇ ಬಸ್ತಾರ್‌ನ ಕೊಂಟಾ, ಬಿಜಾಪುರ ಮತ್ತು ದಾಂತೇವಾಡಾ ವಿಧಾನಸಭಾ ಕ್ಷೇತ್ರಗಳ 59 ಮತಗಟ್ಟೆಗಳಲ್ಲಿ ಶೂನ್ಯಮತದಾನ ಸಾಮಾನ್ಯ ಎಂಬಂತೆ ಆಗಿದೆ. ಕಳೆದ 2013ರ ಚುನಾವಣೆಗಳಲ್ಲಿಯೂ ಈ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಶೂನ್ಯಮತದಾನ ದಾಖಲಾಗಿತ್ತು.ಅನೇಕ ಮತಗಟ್ಟೆಗಳಲ್ಲಿ ಮತದಾನದ ಪ್ರಮಾಣ ಶೇ10ಕ್ಕಿಂತ ಕಡಿಮೆ ಇರುತ್ತದೆ ಎಂದು ಸ್ಥಳೀಯ ಚುನಾವಣಾ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

‘ನಾನು ಈವರೆಗೆ ಒಮ್ಮೆಯೂ ಎಲೆಕ್ಟ್ರಾನಿಕ್ ಮತಯಂತ್ರವನ್ನು ಹತ್ತಿರದಿಂದ ನೋಡಿಲ್ಲ. 2003ರಲ್ಲಿ ಚಿಟಾಲ್‌ನರ್‌ಗೆ ತಂದಿದ್ದಾಗ ನಾನು ಒಮ್ಮೆ ನೋಡಿದ್ದೆ. ಆಗ ನನಗೆ 15 ವರ್ಷ ವಯಸ್ಸು. ನನ್ನ ಮಾವನೊಂದಿಗೆ ಪಮತಗಟ್ಟೆಗೂ ಹೋಗಿದ್ದೆಎ’ ಎಂದು ನೆನಪಿಸಿಕೊಳ್ಳುತ್ತಾರೆ 30 ವರ್ಷ ಘೋರಾ ಮಕ್ರಂ.ರಾಜ್ಯ ಸರ್ಕಾರ ಪ್ರಾಯೋಜಿತ ಸಾಲ್ವಾ ಜುದಂ ಹಿಂಸಾಚಾರ ವಿರೋಧಿಸಿ ಮಾವೋವಾದಿಗಳು 2006ರಲ್ಲಿ ಚುನಾವಣೆ ಬಹಿಷ್ಕರಿಸಲು ಕರೆ ನೀಡಿದ್ದರು. ಅಂದಿನಿಂದ ಮತದಾನ ಬಹಿಷ್ಕಾರ ವಾಡಿಕೆಯೇ ಆಗಿಬಿಟ್ಟಿದೆ. 2011ರಲ್ಲಿ ಸುಪ್ರಿಂಕೋರ್ಟ್ ಸಾಲ್ವ ಜುದಂ ವಿಸರ್ಜಿಸಿದರೂ ಮಾವೋವಾದಿಗಳು ಮತದಾನಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ.

ಮುಕ್ರಂ ಮತ್ತು ಬರ್ಕಪಾಲ್ ನಡುವೆ ಹತ್ತಾರು ಹಳ್ಳಿಗಳಿವೆ. ಈ ಪ್ರದೇಶವನ್ನು ಮಾವೋವಾದಿಗಳ ಅಘೋಷಿತ ರಾಜಧಾನಿ ಎಂದೂ ಕರೆಯುತ್ತಾರೆ. ನಿರ್ಜನ ರಸ್ತೆಗಳು ಮತ್ತು ರಸ್ತೆ ಬದಿಯ ಮರಗಳಲ್ಲಿ ಭೀತಿಯೇ ಮಾರ್ದನಿಸುತ್ತದೆ. ಚುನಾವಣೆಯ ಬಗ್ಗೆ ಯೋಚಿಸಿದರೆ ಪರಿಣಾಮ ನೆಟ್ಟಗಾಗುವುದಿಲ್ಲ ಎನ್ನುವ ಬೆದರಿಕೆ ಜನರನ್ನು ಕಾಡುತ್ತದೆ.

ಮುಕ್ರಾಂ ಗ್ರಾಮದಲ್ಲಿದ್ದ ಶಾಲೆಯನ್ನು ಮಾವೋವಾದಿಗಳು 2006ರಲ್ಲಿ ಸ್ಫೋಟಿಸಿದ್ದರು. 2008ರಲ್ಲಿ ಮತ್ತೆ ಶಾಲೆಯನ್ನು ಆರಂಭಿಸಲಾಯಿತು. ಈ ಶಾಲೆಯ ಶಿಕ್ಷಕ ಟೆಲಂ ಭೀಮಾ, ‘ಇಲ್ಲಿ ಮತದಾನ ನಡೆಯುವ ಸಾಧ್ಯತೆಯೇ ಇಲ್ಲ’ ಎಂದು ನಿರಾಶೆಯ ಮಾತನ್ನಾಡುತ್ತಾರೆ.

‘ಈ ಗ್ರಾಮದ ಬೂತ್‌ ಇಲ್ಲಿಂದ ಎರಡು ಕಿ.ಮೀ. ದೂರವಿರುವ ಚಿಂಟಾಲ್ನಾರ್ ಹಳ್ಳಿಯಲ್ಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಹಳ್ಳಿಯ ಯಾರೊಬ್ಬರೂ ಮತ ಚಲಾಯಿಸಲಿಲ್ಲ. ಈ ವರ್ಷದ ಚುನಾವಣೆಯಲ್ಲಿಯೂ ಮತ ಚಲಾವಣೆ ಅನುಮಾನ’ ಎಂದು ಖಚಿತ ದನಿಯಲ್ಲಿ ಹೇಳಿದರು ಭೀಮಾ. ಅವರು ಈ ಗ್ರಾಮದ ಮತಗಟ್ಟೆ ಅಧಿಕಾರಿಯೂ ಹೌದು.

‘ಹಿಂದೂಸ್ತಾನ್ ಟೈಮ್ಸ್‌’ನ ಪ್ರತಿನಿಧಿಗೆ ಮಾತಿಗೆ ಸಿಕ್ಕ ಮತ್ತೋರ್ವ ಗ್ರಾಮಸ್ಥ ಮಕರಂ ನಂದಾ, ‘ಬೆರಳ ಮೇಲೆ ಮತ ಚಲಾವಣೆಯ ಇಂಕು ಹಾಕಿಸಿಕೊಳ್ಳುವುದು ಗ್ರಾಮಸ್ಥರ ಜೀವಕ್ಕೆ ಆಪತ್ತು. ಇಲ್ಲಿನ ಕೆಲ ಜನರು ಮತ ಹಾಕಲು ಇಷ್ಟಪಡುತ್ತಾರೆ. ಆದರೆ ನಮ್ಮ ಮತಗಟ್ಟೆಗಳು ಚಿಂಟಾಲ್ನಾರ್‌ನಲ್ಲಿವೆ. ಬೆರಳ ಮೇಲೆ ಮತ ಹಾಕಿದ ಗುರುತು ಕಂಡರೆ ಮಾವೋವಾದಿಗಳನ್ನು ನಮ್ಮನ್ನು ಕೊಂದು ಹಾಕುತ್ತಾರೆ’ ಎಂದು ಅಸಹಾಯಕ ಪರಿಸ್ಥಿತಿ ವಿವರಿಸಿದರು.

ಛತ್ತೀಸಗಡದ ರಾಜಧಾನಿ ರಾಯಪುರದಿಂದ ಮುಕ್ರಂ 450 ಕಿ.ಮೀ. ದೂರದಲ್ಲಿದೆ.ಇಲ್ಲಿರುವ ಗ್ರಾಮಸ್ಥರು ಏನು ಬೇಕಿದ್ದರೂ ಕನಿಷ್ಠ 45 ಕಿ.ಮೀ. ನಡೆದು ಬರಬೇಕಿದೆ. ಮುಕ್ರಂ ಸುತ್ತಮುತ್ತಲ ಗ್ರಾಮಸ್ಥರ ಮುಖ್ಯ ಕಸುಬು ಅರಣ್ಯ ಉತ್ಪನ್ನಗಳ ಸಂಗ್ರಹ ಮತ್ತು ಕೋಳಿಸಾಕಣೆ ಎಂದು ಬಸ್ತಾರ್‌ನ ಐಜಿಪಿ ಶಿವಾನಂದ ಸಿನ್ಹಾ ಹೇಳುತ್ತಾರೆ.

‘ಶೂನ್ಯ ಮತದಾನದ ಮತಗಟ್ಟೆಗಳಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದೇವೆ. ಅಗತ್ಯ ಪ್ರಮಾಣದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಕೆಲ ಮತಗಟ್ಟೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಅವರು ವಿವರಿಸಿದರು.

–––

ನಕ್ಸಲ್ ಪ್ರಭಾವಿತ ಪ್ರದೇಶದ ವಿವರ

* 1,78– ಲಕ್ಷ ಒಟ್ಟು ಮತದಾರರು

* 210– ಒಟ್ಟು ಮತಗಟ್ಟೆಗಳು

*ಸುಕ್ಮಾ ಕ್ಷೇತ್ರದ ಮುಖ್ಯ ಅಭ್ಯರ್ಥಿಗಳು– ಕವಾಸಿ ಲಕ್ಮ (ಕಾಂಗ್ರೆಸ್), ಮನಿಖಶ್ ಕುಂಜಂ (ಸಿಪಿಐ) ಮ್ತು ಧನಿರಾಮ್ ಬೋಸ್ (ಬಿಜೆಪಿ)

*2013ರಲ್ಲಿ ಕವಾಸಿ 27,210 ಮತ ಪಡೆದು ಜಯಶಾಲಿಯಾಗಿದ್ದರು. ಶೇ 43ರಷ್ಟು ಮತದಾನವಾಗಿತ್ತು

ಹಿಂಸಾಚಾರದ ಕರಾಳ ಮುಖ

* ಏ.24, 2017: ಸುಕ್ಮಾದ ಬರ್ಕಪಾಲ್ ಸಮೀಪ 25 ಸಿಆರ್‌ಪಿಎಫ್ ಸಿಬ್ಬಂದಿ ಹತ್ಯೆ

* ಮಾರ್ಚ್ 14, 2017: ಸುಕ್ಮಾದ ಭೆಜಿ ಸಮೀಪದ ರಸ್ತೆ ಕಾಮಗಾರಿಗೆ ರಕ್ಷಣೆ ನೀಡುತ್ತಿದ್ದ 14 ಸಿಆರ್‌ಪಿಎಫ್ ಸಿಬ್ಬಂದಿ ಹತ್ಯೆ

* ಏಪ್ರಿಲ್ 2010: ಮುಕ್ರಂ ಹಳ್ಳಿಯ ಬಳಿ 76 ಸಿಆರ್‌ಪಿಎಫ್ ಸಿಬ್ಬಂದಿ ಹತ್ಯೆ. ಇದು ಭದ್ರತಾ ಸಿಬ್ಬಂದಿ ವಿರುದ್ಧ ನಡೆದಿರುವ ಅತಿದೊಡ್ಡ ದಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.