ADVERTISEMENT

ಕನಿಷ್ಠ ಅಂಕ ಪಡೆದವರಿಗೂ ಸುಪ್ರೀಂಕೋರ್ಟ್ ಅವಕಾಶ

ಬಿಎಎಂಎಸ್‌, ಬಿಎಚ್‌ಎಂಎಸ್‌ ಪ್ರವೇಶ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 19:10 IST
Last Updated 2 ಫೆಬ್ರುವರಿ 2019, 19:10 IST
   

ನವದೆಹಲಿ: ಕಳೆದ ವರ್ಷ ನಡೆದಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ)ಯಲ್ಲಿ ಕನಿಷ್ಠ ಅಂಕ ಗಳಿಸಿದ ಅಭ್ಯರ್ಥಿಗಳಿಗೂ ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯಕೀಯ ವಿಜ್ಞಾನ ಪದವಿ (ಬಿಎಎಂಎಸ್‌ ಮತ್ತು ಬಿಎಚ್‌ಎಂಎಸ್‌) ಕೋರ್ಸ್‌ಗೆ ಪ್ರವೇಶ ಪಡೆಯಲು ಸುಪ್ರೀಂ ಕೋರ್ಟ್‌ ಅವಕಾಶ ಕಲ್ಪಿಸಿದೆ.

ಮಹಾರಾಷ್ಟ್ರದ ಹೋಮಿಯೋಪತಿ ಕಾಲೇಜುಗಳ ಆಡಳಿತ ಮಂಡಳಿ ಪರ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್‌ ಹಾಗೂ ಎಂ.ಆರ್‌. ಶಾ ನೇತೃತ್ವದ ಪೀಠ, ಪದವಿ ಕೋರ್ಸ್‌ಗಾಗಿ 2018ರ ಎನ್‌ಇಇಟಿಯಲ್ಲಿ ಶೇ 50 ಮತ್ತು 40 ಅಂಕಗಳ ಅರ್ಹತಾ ಮಾನದಂಡಕ್ಕಿಂತಲೂ ಕಡಿಮೆ ಅಂಕ ಗಳಿಸಿದ ಅಭ್ಯರ್ಥಿಗೂ ಪ್ರವೇಶ ನೀಡಬಹುದು ಎಂದು ಹೇಳಿದೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇ 50 ಹಾಗೂ ಮೀಸಲು ಅಭ್ಯರ್ಥಿಗಳಿಗೆ ಶೇ 40ರಷ್ಟು ಕನಿಷ್ಠ ಅಂಕಗಳನ್ನು ಪ್ರವೇಶದ ಮಾನದಂಡವಾಗಿ ಪರಿಗಣಿಸಿದ್ದನ್ನು ಅರ್ಜಿದಾರು ವಿರೋಧಿಸಿದ್ದರು.

ADVERTISEMENT

ಹೋಮಿಯೋಪತಿ ಕೇಂದ್ರ ಮಂಡಳಿ ರೂಪಿಸಿರುವ 1983ರ ನಿಯಮಗಳ ಪ್ರಕಾರ ಅಭ್ಯರ್ಥಿಯು ಎಸ್ಸೆಸ್ಸೆಲ್ಸಿ ಮತ್ತು ಎರಡು ವರ್ಷಗಳ ಪಿಯುಸಿ (10+2) ಅಭ್ಯಸಿಸಿರಬೇಕು. ಪಿಯುಸಿ ಹಂತದಲ್ಲಿ ಭೌತ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯವನ್ನು ಆಯ್ದುಕೊಂಡಿರಬೇಕು. ಆದರೆ ಕೇಂದ್ರ ಸರ್ಕಾರವು ಈ ನಿಯಮದಾಚೆ ಮಾನದಂಡ ರೂಪಿಸಿದೆ. ಇದರಿಂದಾಗಿ ಅನೇಕ ಸೀಟುಗಳು ಖಾಲಿ ಉಳಿಯುವಂತಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.

ವಿವಿಧ ರಾಜ್ಯಗಳ ಹೈಕೋರ್ಟ್‌ಗಳ ಆದೇಶದ ಕಾರಣ ಬಿಎಎಂಎಸ್‌ ಮತ್ತು ಬಿಎಚ್‌ಎಂಎಸ್‌ ಮೊದಲ ಪರ್ಷದ ಪ್ರವೇಶದಲ್ಲಿ ಏಕರೂಪತೆ ಕಂಡುಬಂದಿಲ್ಲ. 2018ರ ಫೆಬ್ರುವರಿ 5ರಂದು ಹೊರಡಿಸಲಾದ ಮಾಹಿತಿ ಪತ್ರದಲ್ಲಿ ತಿಳಿಸಿರುವ ಅರ್ಹತಾ ಮಾನದಂಡಗಳ ಆಧಾರದಲ್ಲಿ ಕನಿಷ್ಠ ಅಂಕ ಗಳಿಸಿದ ಅಭ್ಯರ್ಥಿಗಳಿಗೂ ಪ್ರವೇಶ ನೀಡಬಹುದಾಗಿದೆ ಎಂದು ನ್ಯಾಯಪೀಠ ತಿಳಿಸಿತು.

ಪ್ರವೇಶ ಪ್ರಕ್ರಿಯೆಯನ್ನು ಫೆಬ್ರುವರಿ 5ರೊಳಗೆ ಪೂರ್ಣಗೊಳಿಸಿ, ಹೆಚ್ಚುವರಿ ತರಗತಿ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದೂ ಪೀಠ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.