ADVERTISEMENT

ಕಾಶ್ಮೀರದಲ್ಲಿ ಕೆಲವರಿಗಷ್ಟೇ ಮೂಲಭೂತ ಹಕ್ಕು ಸೀಮಿತ: ಮೆಹಬೂಬಾ ಕಳವಳ

ಪಿಟಿಐ
Published 31 ಡಿಸೆಂಬರ್ 2022, 12:32 IST
Last Updated 31 ಡಿಸೆಂಬರ್ 2022, 12:32 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಶ್ರೀನಗರ: ‘ಮೂಲಭೂತ ಹಕ್ಕುಗಳು ಭಾರತದಲ್ಲೀಗ ರಾಜಕೀಯ, ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ಮಾತು ಕೇಳುವವರಿಗಷ್ಟೇ ಇರುವ ‘ವಿಲಾಸಿತನದ ಹಕ್ಕುಗಳಾಗಿವೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಈ ಸಂಬಂಧ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ಪತ್ರ ಬರೆದಿರುವ ಅವರು, 2019ರಲ್ಲಿ ಸಂವಿಧಾನದ 370 ವಿಧಿ ಅನ್ನು ರದ್ದುಪಡಿಸಿದ ಬಳಿಕ ರಾಜ್ಯದಲ್ಲಿ ವಿಶ್ವಾಸದ ಕೊರತೆ ಮತ್ತು ಹಕ್ಕುಗಳ ಕಸಿಯುವಿಕೆ ಹೆಚ್ಚಿದೆ ಎಂದಿದ್ದಾರೆ.

ದೇಶದಲ್ಲಿ ಈಗಿರುವ ಸ್ಥಿತಿ ಕುರಿತಂತೆ ಆತಂಕ, ಕಳವಳದಿಂದಲೇ ಪತ್ರ ಬರೆಯುತ್ತಿದ್ದೇನೆ. ಸಾಮಾನ್ಯವಾದ ಪ್ರಕರಣದಲ್ಲಿಯೂ ಕೆಳಹಂತದ ಕೋರ್ಟ್‌ಗಳು ಜಾಮೀನು ನಿರಾಕರಿಸುತ್ತಿವೆ ಎಂಬ ಇತ್ತೀಚಿನ ನಿಮ್ಮ ಹೇಳಿಕೆಯು ಪತ್ರಿಕೆಗಳಲ್ಲಿ ಕೇವಲ ಚಿಕ್ಕ ಸುದ್ದಿಯಾಗುವ ಬದಲಿಗೆ ಒಂದು ನಿರ್ದೇಶನವಾಗಿ ಜಾರಿಗೆ ಬರಬೇಕು ಎಂದು ಪ್ರತಿಪಾದಿಸಿದ್ದಾರೆ. ಪತ್ರವನ್ನು ಅವರು ಟ್ವಿಟರ್‌ನಲ್ಲಿಯೂ ಹಂಚಿಕೊಂಡಿದ್ದಾರೆ.

ADVERTISEMENT

ಆಂಧ್ರಪ್ರದೇಶ ನ್ಯಾಯಾಂಗ ಅಕಾಡೆಮಿ ಉದ್ಘಾಟನೆ ಸಂದರ್ಭದಲ್ಲಿ ಶುಕ್ರವಾರ ಮಾತನಾಡಿದ್ದ ಸಿಜೆಐ, ದಾಖಲೆಗಳ ಕೊರತೆ, ವಕೀಲರ ಅಲಭ್ಯತೆ ಕಾರಣದಿಂದಲೇ ದೇಶದಲ್ಲಿ ಸುಮಾರು 77 ಲಕ್ಷ ವ್ಯಾಜ್ಯಗಳು ಬಾಕಿ ಉಳಿದಿವೆ ಎಂದು ಹೇಳಿದ್ದರು.

ಪಿಡಿಪಿ ಅಧ್ಯಕ್ಷೆಯೂ ಆಗಿರುವ ಮೆಹಬೂಬಾ ಮುಫ್ತಿ ಅವರು, ಸಂವಿಧಾನವು ಎಲ್ಲ ಪ್ರಜೆಗಳಿಗೂ ಮೂಲಭೂತ ಹಕ್ಕು ನೀಡಿದೆ. ದುರದೃಷ್ಟವಶಾತ್ ಇಂದು ಇವು ಕೆಲವರಿಗೆ ಮಾತ್ರವೇ ಇರುವ ಐಷಾರಾಮಿ ಅವಕಾಶಗಳಾಗಿವೆ ಎಂದು ವಿಷಾದಿಸಿದ್ದಾರೆ.

2019ರ ನಂತರ ಜಮ್ಮು ಕಾಶ್ಮೀರದ ಪ್ರತಿಯೊಬ್ಬ ಪ್ರಜೆಯ ಪ್ರಾಥಮಿಕ ಹಕ್ಕುಗಳನ್ನು ಕಸಿಯಲಾಗಿದೆ.ನಾಗರಿಕರ ಪಾಸ್‌ಪೋರ್ಟ್‌ ತಡೆಹಿಡಿಯಲಾಗಿದೆ. ಪತ್ರಕರ್ತರು ಗಡಿದಾಟದಂತೆ ನಿರ್ಬಂಧ ಹೇರಲಾಗುತ್ತಿದೆ, ಜೈಲಿಗೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ. ಸಿಜೆಐ ಅವರ ಮಧ್ಯಪ್ರವೇಶವು ಜಮ್ಮು ಮತ್ತು ಕಾಶ್ಮೀರದ ಜನತೆಗೆ ಘನತೆಯ ಬದುಕು ತಂದುಕೊಡಬಲ್ಲದು ಎಂದು ಆಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.