ADVERTISEMENT

ವೈರಸ್‌ ನಿಯಂತ್ರಣಕ್ಕೆ ಬಿಸಿಜಿ? ಹೆಚ್ಚಿನ ಸಂಶೋಧನೆ ಅಗತ್ಯ, ವೈದ್ಯರ ಪ್ರತಿಪಾದನೆ

ಪಿಟಿಐ
Published 2 ಏಪ್ರಿಲ್ 2020, 20:00 IST
Last Updated 2 ಏಪ್ರಿಲ್ 2020, 20:00 IST
   

ನವದೆಹಲಿ: ಕೊರೊನಾ ವೈರಸ್‌ ನಿಯಂತ್ರಿಸುವಲ್ಲಿ ಬಿಸಿಜಿ ಲಸಿಕೆ ಮಹತ್ವದ ಪಾತ್ರ ವಹಿಸುತ್ತಿದೆ ಎನ್ನುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಬಿಸಿಜಿ ಲಸಿಕೆ ಹಾಕಿಸಿಕೊಂಡವರಿಗೆ ರೋಗ ನಿರೋಧಕ ಶಕ್ತಿ ಇರುತ್ತದೆ. ಇದರಿಂದ, ಕೊರೊನಾ ವೈರಸ್‌ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಕಡಿಮೆ ಎನ್ನುವ ವಿಶ್ಲೇಷಣೆಗಳು, ಅಧ್ಯಯನಗಳು ವರದಿಯಾಗಿವೆ. ಆದರೆ, ಈ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ಇಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ, ಸಂಶೋಧನೆಗಳು ನಡೆಯಬೇಕಾಗಿದೆ ಎಂದು ಭಾರತದಲ್ಲಿನ ವೈದ್ಯರು ಪ್ರತಿಪಾದಿಸಿದ್ದಾರೆ.

ಭಾರತದಲ್ಲಿ ಬಿಸಿಜಿ (ಬ್ಯಾಸಿಲಸ್ ಕ್ಯಾಲ್ಮೆಟ್-ಗುಯಿರಿನ್) ಲಸಿಕೆ ಹಾಕುವುದು ಸಾರ್ವತ್ರಿಕ ಕಾರ್ಯಕ್ರಮವಾಗಿದೆ. ಮಕ್ಕಳು ಜನಿಸಿದ ಸಂದರ್ಭದಲ್ಲಿ ಅಥವಾ ಕೆಲ ದಿನಗಳಲ್ಲೇ ಈ ಲಸಿಕೆ ಹಾಕಲಾಗುತ್ತದೆ. 1948ರಿಂದ ಈ ಲಸಿಕೆ ಹಾಕುವ ಕಾರ್ಯಕ್ರಮ ಜಾರಿಯಲ್ಲಿದೆ. ಇರಾನ್‌ನಲ್ಲಿಯೂ 1984ರಿಂದ ಈ ಲಸಿಕೆ ಹಾಕುವುದನ್ನು ಆರಂಭಿಸಲಾಯಿತು. ಹೀಗಾಗಿ, 1984ಕ್ಕೂ ಮುನ್ನ ಮತ್ತು ನಂತರ ಜನಿಸಿದವರಲ್ಲಿ ಕೊರೊನಾ ವೈರಸ್‌ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಅಪಾರ ವ್ಯತ್ಯಾಸವಿದೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

‘ಬಿಸಿಜಿ ಲಸಿಕೆಗೂ ಕೊರೊನಾ ವೈರಸ್‌ ಪ್ರಕರಣಗಳಿಗೂ ಹೋಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯ. ಆದರೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಪರಿಸ್ಥಿತಿ ನೋಡಿದಾಗ ಭಾರತೀಯರು ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದ್ದಾರೆ’ ಎಂದು ಸರ್‌ ಗಂಗಾ ರಾಮ್‌ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಅರವಿಂದ್‌ ಕುಮಾರ್‌ ವಿಶ್ಲೇಷಿಸಿದ್ದಾರೆ.

‘ಬಿಸಿಜಿಯಿಂದ ಸೋಂಕು ನಿವಾರಣೆಯಾಗುತ್ತದೆ ಎಂದು ಈಗಲೇ ಖಚಿತಹೇಳಲು ಸಾಧ್ಯವಿಲ್ಲ’ ಎಂದು ಫರಿದಾಬಾದ್‌ನ ಫೋರ್ಟಿಸ್‌ ಎಸ್ಕಾರ್ಟ್ಸ್‌ನ ವೈದ್ಯ ರವಿಶಂಕರ್‌ ಝಾ ತಿಳಿಸಿದ್ದಾರೆ.

ಲಸಿಕೆ ಹಾಕದ ರಾಷ್ಟ್ರಗಳಲ್ಲಿ ಹೆಚ್ಚು ಪ್ರಕರಣ
ನ್ಯೂಯಾರ್ಕ್‌ ತಂತ್ರಜ್ಞಾನ ಸಂಸ್ಥೆ (ಎನ್‌ವೈಐಟಿ) ನಡೆಸಿದ ಅಧ್ಯಯನದಲ್ಲಿ, ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾಗಿರುವ ಇಟಲಿ, ಅಮೆರಿಕದ ಉದಾಹರಣೆಗಳನ್ನು ನೀಡಲಾಗಿದೆ.

‘ಸಾರ್ವತ್ರಿಕವಾಗಿ ಬಿಸಿಜಿ ಲಸಿಕೆ ಹಾಕುವ ಯೋಜನೆ ಇಲ್ಲದ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವೈರಸ್‌ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇಟಲಿ, ನೆದರ್ಲೆಂಡ್‌, ಅಮೆರಿಕದಲ್ಲಿನ ಪ್ರಕರಣಗಳು ಇದಕ್ಕೆ ಸಾಕ್ಷಿ. ಆದರೆ, ಹಲವು ವರ್ಷಗಳಿಂದ ಬಿಸಿಜಿ ಲಸಿಕೆ ಹಾಕುತ್ತಿರುವ ರಾಷ್ಟ್ರಗಳಲ್ಲಿ ಕಡಿಮೆ ಪ್ರಕರಣಗಳು ವರದಿಯಾಗಿವೆ’ ಎಂದು ಎನ್‌ವೈಐಟಿಯ ಸಹಾಯಕ ಪ್ರಾಧ್ಯಾಪಕ ಮತ್ತು ಸಂಶೋಧಕ ಗೊಂಝಾಲೊ ಒಟಾಝು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.