ADVERTISEMENT

ಲಕ್ಷಾಧಿಪತಿ ಭಿಕ್ಷುಕನ ಸಾವು: ವಾರಸುದಾರರಿಗಾಗಿ ಹುಡುಕಾಟ

ಏಜೆನ್ಸೀಸ್
Published 8 ಅಕ್ಟೋಬರ್ 2019, 17:22 IST
Last Updated 8 ಅಕ್ಟೋಬರ್ 2019, 17:22 IST
   

ಮುಂಬೈ: ‘ಗೋವಂಡಿ ಹಾಗೂ ಮಾನಖುರ್ದ್ ನಡುವಿನ ರೈಲ್ವೆ ಹಳಿ ಬಳಿ ಭಿಕ್ಷುಕನೊಬ್ಬನ ಶವ ಪತ್ತೆಯಾಗಿದ್ದು, ಈತ ಒಟ್ಟು ₹11.48 ಲಕ್ಷಕ್ಕೆ ಒಡೆಯನಾಗಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೃತ ಭಿಕ್ಷುಕ ಬಿರದಿಚಂದ್ ಪನ್ನಾ ರಾಮ್‌ಜಿ ಆಜಾದ್ (82) ಬಳಿ ₹1.75 ಲಕ್ಷ ಮೊತ್ತದ ನಾಣ್ಯಗಳು ದೊರಕಿವೆ. ಜತೆಗೆ ₹8.77 ಲಕ್ಷ ಮೊತ್ತದ ನಿಶ್ಚಿತ ಠೇವಣಿಪತ್ರಗಳು ಇದ್ದವು. ಈತನ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿ ₹96,000 ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜಸ್ಥಾನದ ಈತ ಗೋವಂಡಿ–ಮಾನಖುರ್ದ್ ರೈಲ್ವೆ ನಿಲ್ದಾಣದ ಸಮೀಪ ಗುಡಿಸಲಿನಲ್ಲಿ ವಾಸಿಸುತ್ತಿದ್ದ. ಹಾರ್ಬರ್ ಲೈನ್ ಉಪನಗರ ರೈಲುಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

‘ರೈಲ್ವೆ ಹಳಿ ಸಮೀಪ ವ್ಯಕ್ತಿಯೊಬ್ಬನ ಶವ ಇರುವುದಾಗಿ ನಮಗೆ ಕರೆ ಬಂದಿತು. ಸ್ಥಳಕ್ಕೆ ತೆರಳಿದಾಗ ಸ್ಥಳೀಯರು ಮೃತನನ್ನು ಆಜಾದ್ ಎಂದು ಗುರುತಿಸಿ ಮಾಹಿತಿ ನೀಡಿದರು. ಆತನ ಗುಡಿಸಲಿನಲ್ಲಿ ಪರಿಶೀಲಿಸಿದಾಗ, ನಾಣ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಿ ಅದನ್ನು ಡಬ್ಬದೊಳಗೆ ಇಟ್ಟಿದ್ದು ಕಂಡುಬಂದಿತು. ಜತೆಗೆ ಬ್ಯಾಂಕ್ ದಾಖಲೆಗಳು, ಆಧಾರ್, ಪಾನ್‌ ಕಾರ್ಡ್ ಹಾಗೂ ಹಿರಿಯ ನಾಗರಿಕರ ಪತ್ರ ದೊರಕಿದವು. ರಾಜಸ್ಥಾನದಲ್ಲಿರುವ ಆತನ ಪುತ್ರ ಸುಖದೇವ್‌ನನ್ನು ಅಲ್ಲಿನ ಪೊಲೀಸರ ಮೂಲಕ ಸಂಪರ್ಕಿಸಲು ಯತ್ನಿಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.