ADVERTISEMENT

ಬೆಳಗಾವಿ ಪ್ರವೇಶ ವಿಫಲ: ತಾರಕಕ್ಕೇರಿದ ಗಡಿ ತಂಟೆ

l ಕರವೇ ಕಾರ್ಯಕರ್ತರು, ಎಂಇಎಸ್‌ ಮುಖಂಡರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 21:48 IST
Last Updated 6 ಡಿಸೆಂಬರ್ 2022, 21:48 IST
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಬಳಿ ಮಂಗಳವಾರ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು, ಮಹಾರಾಷ್ಟ್ರ ನೋಂದಣಿಯ ಲಾರಿಗಳ ಮೇಲೆ ಹತ್ತಿ ನಾಡಧ್ವಜ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ: ಶಿವಕುಮಾರ ಪಾಟೀಲ
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಬಳಿ ಮಂಗಳವಾರ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು, ಮಹಾರಾಷ್ಟ್ರ ನೋಂದಣಿಯ ಲಾರಿಗಳ ಮೇಲೆ ಹತ್ತಿ ನಾಡಧ್ವಜ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ: ಶಿವಕುಮಾರ ಪಾಟೀಲ   

ಬೆಳಗಾವಿ: ಒಂದೆಡೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಪ‍್ರತಿಭಟನೆ, ಇನ್ನೊಂದೆಡೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮೊಂಡಾಟದಿಂದಾಗಿ ಮಂಗಳವಾರ ಜಿಲ್ಲೆಯ ಜನಜೀವನ ಗಡಿ ಗದ್ದಲದಲ್ಲೇ ಕಳೆಯಿತು.

ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ 21 ಮಾರ್ಗಗಳಲ್ಲೂ ಪೊಲೀಸ್ ಚೆಕ್‌ಪೋಸ್ಟ್‌ ನಿರ್ಮಿಸಿ, ಬಿಗಿ ಭದ್ರತೆ ಒದಗಿಸಲಾಯಿತು. ಪ್ರತಿಯೊಂದು ವಾಹನವನ್ನೂ ಕೂಲಂಕಶವಾಗಿ ತಪಾಸಣೆ ಮಾಡಿ ಬಿಡಲಾಯಿತು.

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ, ಶಂಭುರಾಜ್ ದೇಸಾಯಿ ಹಾಗೂ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ ಅವರ ಮೇಲೆ ಬೆಳಗಾವಿ ಗಡಿ ಪ್ರವೇಶಿಸದಂತೆ, ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದರು. ಹೀಗಾಗಿ ಅವರು ಬೆಳಗಾವಿಗೆ ಬರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರದಿಂದ ಬರುವ ಎಲ್ಲ ವಾಹನಗಳನ್ನೂ ತಪಾಸಣೆ ಮಾಡಲಾಯಿತು.

ADVERTISEMENT

ಕರವೇ ಕಾರ್ಯಕರ್ತರ ವಶ: ಗಡಿ ವಿಚಾರವಾಗಿ ಮಹಾರಾಷ್ಟ್ರದ ನಿಲುವು ಖಂಡಿಸಿ ಪ್ರತಿಭಟನೆಗೆ ಬೆಳಗಾವಿಗೆ ಬರುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಹಲವು ಕಾರ್ಯಕರ್ತರನ್ನು, ಹಿರೇಬಾಗೇವಾಡಿಯ ಬಳಿ ಪೊಲೀಸರು ವಶಕ್ಕೆ ‍ಪಡೆದರು.

ರೊಚ್ಚಿಗೆದ್ದ ಪ್ರತಿಭಟನಕಾರರು 16 ವಾಹನಗಳ ಮೇಲೆ ಕಲ್ಲು ತೂರಿ ಗಾಜು ಒಡೆದರು. ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳ ಮೇಲೆ ಹತ್ತಿನಿಂತು ಕನ್ನಡಧ್ವಜ ಪ್ರದರ್ಶಿಸಿದರು. ಹಲವು ವಾಹನಗಳ ನಂಬರ್‌ ಪ್ಲೇಟ್‌ ಕಿತ್ತರು, ಮಸಿ ಬಳಿದರು.

‘ಬೆಳಗಾವಿ ನಮ್ಮ ನಮ್ಮೂರು, ನಮ್ಮ ಉಸಿರು. ನಮ್ಮೂರಿಗೇ ನಮ್ಮನ್ನು ಬಿಡದಿರುವ ಪೊಲೀಸರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ನಾರಾಯಣ ಗೌಡ, ‘ಗಡಿ ವಿವಾದ ನಿರ್ಧಾರ ಆಗುವವರೆಗೆ ಮಹಾರಾಷ್ಟ್ರ ಸಚಿವರು ಬಾಯಿ ಮುಚ್ಚಿಕೊಂಡಿರಬೇಕು.ಅದನ್ನು ಬಿಟ್ಟು ಹೇಡಿಗಳಂತೆ ಧಮ್ಕಿ ಹಾಕುತ್ತಾರೆ. ಒಕ್ಕೂಟ ವ್ಯವಸ್ಥೆಗೆ ಕಪ್ಪುಚುಕ್ಕೆ ತಂದ ದ್ರೋಹಿಗಳು’ ಎಂದು ಕಿಡಿ ಕಾರಿದರು.

ಬೆಳಗಾವಿಗೆ ಹೋಗಿಯೇ ಸಿದ್ಧ

ಬೆಳಗಾವಿ: ‘ನಾವು ಬೆಳಗಾವಿಗೆ ಹೋಗುವ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಕೆಲವೇ ದಿನಗಳಲ್ಲಿ ಅಲ್ಲಿಗೆ ಹೋಗುತ್ತೇವೆ. ಯಾರ ಆದೇಶಕ್ಕೂ ಹೆದರುವ ಜಾಯಮಾನ ನಮ್ಮದಲ್ಲ’ ಎಂದು ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಶಂಭುರಾಜ್‌ ದೇಸಾಯಿ ಹೇಳಿದ್ದಾರೆ.

ಬೆಳಗಾವಿಗೆ ಭೇಟಿ ನೀಡದ ಗಡಿ ಉಸ್ತುವಾರಿ ವಹಿಸಿಕೊಂಡ ಇಬ್ಬರೂ ಸಚಿವರ ವಿರುದ್ಧ ಮಹಾರಾಷ್ಟ್ರದಲ್ಲಿ ಶಿವಸೇನೆ(ಯು) ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ಡಾ.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಸಂದರ್ಭದಲ್ಲಿ ಯಾವುದೇ ಗಲಾಟೆ ಆಗಬಾರದು, ಅಪಾಯ ಸಂಭವಿಸಬಾರದು ಎಂಬ ಕಾರಣಕ್ಕೆ ಮಂಗಳವಾರದ ಬೆಳಗಾವಿ ಪ್ರವಾಸ ಮುಂದೂಡಿದ್ದೇವೆ. ಶೀಘ್ರದಲ್ಲೇ ಅಲ್ಲಿಗೆ ಕಾಲಿಡುತ್ತೇವೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.