ADVERTISEMENT

ಪಶ್ಚಿಮ ಬಂಗಾಳದಲ್ಲಿ ಕೋವಿಡ್ ನಿರ್ಬಂಧಗಳು ಮತ್ತಷ್ಟು ಸಡಿಲಿಕೆ

ಪಿಟಿಐ
Published 14 ಜೂನ್ 2021, 13:14 IST
Last Updated 14 ಜೂನ್ 2021, 13:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ.

ಪರಿಸ್ಥಿತಿ ಸುಧಾರಿಸಿರುವ ಕಾರಣ ಜೂನ್ 16ರಿಂದ ಶೇಕಡಾ 25ರಷ್ಟು ಉದ್ಯೋಗಿಗಳ ಸಾಮರ್ಥ್ಯದೊಂದಿಗೆಕಚೇರಿ ತೆರೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಆದೇಶದ ವರೆಗೆ ಸಾರ್ವಜನಿಕ ಸಾರಿಗೆ ಸೇವೆಗಳ ಮೇಲಿನ ನಿರ್ಬಂಧಗಳು ಮುಂದುವರಿಯುವುದರಿಂದ ಕಂಪನಿಗಳು ಉದ್ಯೋಗಿಗಳ ಸಂಚಾರಕ್ಕೆವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ಎಚ್.‌ಕೆ. ದ್ವಿವೇದಿ ತಿಳಿಸಿದ್ದಾರೆ.

ADVERTISEMENT

ಬುಧವಾರದಿಂದ ಶಾಪಿಂಗ್ ಮಾಲ್‌ಗಳು ಬೆಳಗ್ಗೆ 11ರಿಂದ ಸಂಜೆ 6ರ ವರೆಗೆ ಕಾರ್ಯನಿರ್ವಹಿಸಬಹುದು. ಮಾರುಕಟ್ಟೆಗಳು ಬೆಳಗ್ಗೆ 7ರಿಂದ 11ರ ವರೆಗೆ ತೆರೆದುಕೊಳ್ಳಬಹುದು.

ರೆಸ್ಟೋರೆಂಟ್‌ ಹಾಗೂ ಬಾರ್‌ಗಳಲ್ಲಿ ಶೇಕಡಾ 50ರಷ್ಟು ಆಸನ ಸಾಮರ್ಥ್ಯದೊಂದಿಗೆ ಮಧ್ಯಾಹ್ನದಿಂದ ರಾತ್ರಿ 8ರ ವರೆಗೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ಮುಚ್ಚಿದ ಕ್ರೀಡಾಂಗಣಗಳಲ್ಲಿ ಕ್ರೀಡಾಕೂಟ ಆಯೋಜಿಸಬಹುದಾಗಿದೆ. ಹಾಗೆಯೇ ಸಂಪೂರ್ಣವಾಗಿ ಲಸಿಕೆ ಹಾಕಿಸಿದವರಿಗೆ ಬೆಳಗ್ಗೆ ನಡೆದಾಡಲು ಉದ್ಯಾನ ತೆರೆದಿರುತ್ತವೆ ಎಂದಿದ್ದಾರೆ.

ಹಾಗೆಯೇ ಸಂಪೂರ್ಣ ಲಸಿಕೆ ಹಾಕಿಸಿದವರು ಒಳಾಂಗಣ ಮತ್ತು ಹೊರಾಂಗಣ ಚಲನಚಿತ್ರ ಶೂಟಿಂಗ್ 50 ಜನರ ಮಿತಿಯೊಂದಿಗೆ ಪುನರಾರಂಭಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮೇ 16ರಿಂದ 30ರ ವರೆಗೆ ರಾಜ್ಯದಲ್ಲಿ ನಿರ್ಬಂಧವನ್ನು ಹೇರಲಾಗಿತ್ತು. ಬಳಿಕ ಜೂನ್ 15ರ ವರೆಗೆ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.