ADVERTISEMENT

ವಿದೇಶಿ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಹೇಳಿಕೆ ಬೇಡ: ಮಮತಾಗೆ ರಾಜ್ಯಪಾಲ ಒತ್ತಾಯ

ಪಿಟಿಐ
Published 25 ಜುಲೈ 2024, 4:24 IST
Last Updated 25 ಜುಲೈ 2024, 4:24 IST
<div class="paragraphs"><p>ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ. ವಿ. ಆನಂದ ಬೋಸ್</p></div>

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ. ವಿ. ಆನಂದ ಬೋಸ್

   

ಕೊಲ್ಕತ್ತ: ನೆರೆಯ ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ರಾಷ್ಟ್ರದ ಬಾಹ್ಯ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಯಾವುದೇ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಬೇಡಿ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ. ವಿ. ಆನಂದ ಬೋಸ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಒತ್ತಾಯಿಸಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಬಾಂಗ್ಲಾದೇಶದ ಜನರಿಗೆ ಆಶ್ರಯ ನೀಡುವ ಬಗ್ಗೆ ಮಮತಾ ನೀಡಿದ್ದ ಹೇಳಿಕೆಗೆ ಬಾಂಗ್ಲಾದೇಶದ ವಿದೇಶಾಂಗ ಸಚಿವ ಹಸನ್ ಮಹಮೂದ್ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ರಾಜ್ಯಪಾಲರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಎಕ್ಸ್‌ನಲ್ಲಿ ವಿಡಿಯೊ ಪೋಸ್ಟ್‌ ಹಂಚಿಕೊಂಡಿರುವ ವಿದೇಶಾಂಗ ಸಚಿವ ಹಸನ್, ‘ಗೌರವಾನ್ವಿತ ಮಮತಾ ಬ್ಯಾನರ್ಜಿ ಅವರೆ, ಬಾಂಗ್ಲಾದೇಶದ ಕುರಿತು ನೀವು ನೀಡಿರುವ ಹೇಳಿಕೆ ಜನರಲ್ಲಿ ಗೊಂದಲ ಸೃಷ್ಟಿ ಮಾಡುವಂತಿದೆ. ಹೀಗಾಗಿ ನಿಮ್ಮ ಹೇಳಿಕೆ ಕುರಿತು ಭಾರತ ಸರ್ಕಾರಕ್ಕೆ ನೋಟೀಸ್‌ ಕಳುಹಿಸಿದ್ದೇವೆ’ ಎಂದು ಹೇಳಿದ್ದಾರೆ. 

ಹಸನ್‌ ಅವರು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಸರ್ಕಾರದೊಂದಿಗೆ ಸಂವಹನ ನಡೆಸಿದ್ದಾರೆ ಎಂದು ವರದಿಯಾಗಿದೆ.‌

ಈ ನಡುವೆ ಬಿಜೆಪಿ ನಾಯಕ ಅಮಿತ್‌ ಮಾಳವಿಯ ಅವರು ಬಾಂಗ್ಲಾ ವಿದೇಶಾಂಗ ಸಚಿವ ಹಸನ್‌ ಅವರ ವಿಡಿಯೊವನ್ನು ಮರುಹಂಚಿಕೊಂಡು, ‘ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳಕ್ಕೆ ಮಾತ್ರವಲ್ಲದೆ ಈಗ ಭಾರತಕ್ಕೂ ಮುಜುಗರ ಉಂಟಾಗುವಂತೆ ಮಾಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. 

ಕಳೆದ ವಾರ ಟಿಎಂಸಿ ಆಯೋಜಿಸಿದ್ದ ಹುತ್ಮಾತರ ದಿನದ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ‘ಬಾಂಗ್ಲಾದೇಶ ಸಾರ್ವಭೌಮ ರಾಷ್ಟ್ರವಾಗಿದೆ. ಅದರ ಆಂತರಿಕ ವಿದ್ಯಮಾನಗಳ ಕುರಿತು ನಾನು ಮಾತನಾಡುವುದಿಲ್ಲ. ಈ ವಿಷಯವು ಕೇಂದ್ರಕ್ಕೆ ಸಂಬಂಧಿಸಿದ್ದಾಗಿದೆ. ಆದರೆ, ನೆರೆಯ ದೇಶದ ಅಸಹಾಯಕ ಜನರು ಸಹಾಯ ಕೋರಿ ಬಂದರೆ, ನಾವು ಖಂಡಿತವಾಗಿಯೂ ಅವರಿಗೆ ಆಶ್ರಯ ನೀಡುತ್ತೇವೆ’ ಎಂದು ಹೇಳಿದ್ದರು. ಈ ಹೇಳಿಕೆ ಈಗ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.