ಕಾರು
ಕೋಲ್ಕತ್ತ: ಪಶ್ಚಿಮ ಬಂಗಾಳದ ಸಚಿವ ಮತ್ತು ಜಮಿಯತ್ ಉಲೇಮಾ– ಈ– ಹಿಂದ್ ಅಧ್ಯಕ್ಷ ಸಿದ್ದಿಖುಲ್ಲಾ ಚೌಧರಿ ಅವರ ವಾಹನದ ಮೇಲೆ ಪೂರ್ವ ವರ್ಧಮಾನ್ ಜಿಲ್ಲೆಯಲ್ಲಿ ಗುಂಪೊಂದು ಗುರುವಾರ ದಾಳಿ ಮಾಡಿದ್ದು, ಅಪಾಯದಿಂದ ಪಾರಾಗಿದ್ದಾರೆ.
‘ದಾಳಿಕೋರರು ನಮ್ಮ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಕಾರಿನ ಕಿಟಕಿ ಗಾಜು ಒಡೆದು ನನ್ನ ಕೈಗೆ ಗಾಯವಾಗಿದೆ’ ಎಂದು ಸಿದ್ದಿಖುಲ್ಲಾ ಚೌಧರಿ ತಿಳಿಸಿದ್ದಾರೆ.
‘ಸ್ಥಳೀಯ ಪಂಚಾಯಿತಿ ಮುಖ್ಯಸ್ಥ ರಫೀಕ್ ಇಸ್ಲಾಂ ಶೇಖ್ ಅವರ ಬೆಂಬಲಿಗರು ನನನ್ನು ಕೊಲ್ಲಲು ದಾಳಿ ನಡೆಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಭದ್ರತಾ ಸಿಬ್ಬಂದಿ ಮಾತ್ರ ನನ್ನ ರಕ್ಷಣೆಗೆ ಬಂದರು’ ಎಂದು ಆರೋಪಿಸಿದ್ದಾರೆ.
ಆಡಳಿತವು ದಾಳಿಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಫೀಕ್ ಇಸ್ಲಾಂ ಶೇಖ್, ‘ಮಂಟೇಶ್ವರ ಜನರಿಗೆ ಏನೂ ಮಾಡದ ಭ್ರಷ್ಟ ಸಚಿವರ ವಿರುದ್ಧ ಅಸಮಾಧಾನಗೊಂಡು ಸ್ಥಳೀಯರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ನಮ್ಮ ಕುಂದುಕೊರತೆಗಳನ್ನು ಆಲಿಸದೆ ಹೋಗುತ್ತಿದ್ದ ಸಚಿವರ ವಾಹನಕ್ಕೆ ಹಾನಿಯಾಗಿದೆ. ಇದನ್ನು ಅವರು ಕೊಲೆ ಯತ್ನ ಎಂದು ನಾಟಕವಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಮಂಟೇಶ್ವರ ವಿಧಾನಸಭಾ ಕ್ಷೇತ್ರದಿಂದ 2021ರಲ್ಲಿ ಸಿದ್ದಿಖುಲ್ಲಾ ಚೌಧರಿ ಗೆಲುವು ಸಾಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.