ADVERTISEMENT

ಹೌರಾಗೆ ತೆರಳುತ್ತಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ತಡೆದ ಪೊಲೀಸರು

ಪಿಟಿಐ
Published 12 ಜೂನ್ 2022, 11:12 IST
Last Updated 12 ಜೂನ್ 2022, 11:12 IST
ಸುವೇಂದು ಅಧಿಕಾರಿ, ಬಿಜೆಪಿ ನಾಯಕ 
ಸುವೇಂದು ಅಧಿಕಾರಿ, ಬಿಜೆಪಿ ನಾಯಕ    

ತಮಲುಕ್, ಪಶ್ಚಿಮ ಬಂಗಾಳ: ಗಲಭೆಪೀಡಿತ ಹೌರಾ ಜಿಲ್ಲೆ ಭೇಟಿಗೆ ತೆರಳುತ್ತಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನು ಭಾನುವಾರ ಮಧ್ಯಾಹ್ನ ಮಾರ್ಗಮಧ್ಯೆ ಪುರ್ಬಾ ಮೆಡಿನಿಪುರ್ ಜಿಲ್ಲೆಯ ತಮಲುಕ್ ಬಳಿ ತಡೆ ಹಿಡಿಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಸುವೇಂದು ಅಧಿಕಾರಿ ಅವರನ್ನು ಮಾರ್ಗಮಧ್ಯೆ ತಡೆ ಹಿಡಿಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

‘ಅಧಿಕಾರಿ ಅವರು ಹೌರಾ ಜಿಲ್ಲೆಗೆ ಭೇಟಿ ನೀಡುತ್ತಿರುವ ಮಾಹಿತಿ ಲಭ್ಯವಾಯಿತು. ಅವರ ಭೇಟಿಯಿಂದ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು. ಈ ಕಾಋಣ ಅವರು ಈ ಸ್ಥಳಕ್ಕೆ ಭೇಟಿ ನೀಡದಂತೆ ತಡೆ ಹಿಡಿಯಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.

ಹೌರಾದತ್ತ ಹೊರಡುವ ಮುನ್ನ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅಧಿಕಾರಿ ಅವರು,‘ಹಿಂಸಾರೂಪದ ಪ್ರತಿಭಟನೆ ವೇಳೆ ದಾಳಿಗೆ ಸಿಲುಕಿದ ನಮ್ಮ ಪಕ್ಷದ ಕಚೇರಿಗೆ ಭೇಟಿ ನೀಡುತ್ತೇನೆ. ನಿಷೇಧಾಜ್ಞೆ ಹೇರಲಾದ ಸ್ಥಳಗಳಿಗೆ ತೆರಳದಂತೆ ಪೊಲೀಸರು ನನಗೆ ಹೇಳಿದ್ದಾರೆ. ಆದರೆ, ನಿರ್ಬಂಧ ಆದೇಶಗಳನ್ನು ಉಲ್ಲಂಘಿಸಿ, ನಾನೊಬ್ಬನೇ ಅಲ್ಲಿಗೆ ಹೋಗುತ್ತೇನೆ. ಒಂದು ವೇಳೆ ಪೊಲೀಸರು ನನ್ನನ್ನು ತಡೆದರೆ, ಸೋಮವಾರ ನ್ಯಾಯಾಲಯಕ್ಕೆ ಹೋಗುತ್ತೇನೆ’ ಎಂದು ಹೇಳಿದರು.

ADVERTISEMENT

ಪ್ರವಾದಿ ಮಹಮ್ಮದ್ ಕುರಿತಾಗಿ ಬಿಜೆಪಿಯಿಂದ ಅಮಾನತುಗೊಂಡ ನೂಪುರ್ ಶರ್ಮಾ ಅವರ ಹೇಳಿಕೆ ಖಂಡಿಸಿ, ಇತ್ತೀಚೆಗೆ ದೇಶದಾದ್ಯಂತ ದಿಢೀರ್ ಆಗಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ಹೌರಾದಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.