ADVERTISEMENT

ರಾತ್ರಿ ಹೊತ್ತು ಮನೆಗೆ ನುಗ್ಗಿದ ಆನೆಯ ಸೊಂಡಿಲಿನಿಂದ ಮಕ್ಕಳನ್ನು ರಕ್ಷಿಸಿದ ತಾಯಿ 

ಸೌಮ್ಯ ದಾಸ್
Published 14 ಆಗಸ್ಟ್ 2020, 3:13 IST
Last Updated 14 ಆಗಸ್ಟ್ 2020, 3:13 IST
ಪ್ರಾತಿನಿಧಿಕ  ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಅಲಿಪುರ್‍‌ದೌರ್ ಜಿಲ್ಲೆಯ ಕಲ್ಚಿನಿ ಪ್ರದೇಶದಲ್ಲಿನ ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದ ನಸೀಮಾ ಅನ್ಸಾರಿ ಎಂಬಾಕೆಯ ಮನೆಗೆ ಸೋಮವಾರ ಆನೆಯೊಂದು ನುಗ್ಗಿತ್ತು. ತಗಡಿನ ಗೋಡೆಯಿರುವ ಪುಟ್ಟ ಮನೆಯ ಒಂದು ಕೋಣೆಯಲ್ಲಿ ಆಕೆ ಮತ್ತು ಮೂರು ಮಕ್ಕಳು ನಿದ್ರಿಸುತ್ತಿದ್ದು, ಆಕೆಯ ಗಂಡ ಪಕ್ಕದ ಕೋಣೆಯಲ್ಲಿ ಮಲಗಿದ್ದರು.

ಮಧ್ಯರಾತ್ರಿ ಗೋಡೆ ಒಡೆದ ಸದ್ದು ಕೇಳಿ ಎಚ್ಚೆತ್ತ ನಸೀಮಾ ಕಂಡದ್ದು ಆನೆಯೊಂದು ಗೋಡೆ ಬಳಿ ನಿಂತಿದೆ.ಏನು ಮಾಡಬೇಕು ಎಂದು ತಿಳಿಯದೆ ಅತ್ತ ನೋಡಿದಾಗ ತನ್ನ ಇಬ್ಬರು ಮಕ್ಕಳನ್ನು ಆನೆ ಸೊಂಡಿಲಿನಿಂದ ಹಿಡಿದು ಕೊಂಡಿತ್ತು. ಮಕ್ಕಳು ಹೆದರಿ ಕಂಗಾಲಾಗಿದ್ದರು.ತಕ್ಷಣವೇ ಅಪಾಯ ಅರಿತ ನಸೀಮಾ ಆನೆಯ ಸೊಂಡಿಲನ್ನು ಗಟ್ಟಿಯಾಗಿ ಗೋಡೆಗೆ ಒತ್ತಿ ಹಿಡಿದರು. ತಗಡಿನ ಗೋಡೆಯಾಗಿದ್ದರಿಂದ ಅದರ ಅಂಚು ಸೊಂಡಿಲಿಗೆ ತಾಗಿದ ಕೂಡಲೇ ಆನೆ ಹಿಡಿತ ಸಡಿಲಿಸಿತು. ತಕ್ಷಣವೇ ಆ ತಾಯಿ ತನ್ನ ಮಕ್ಕಳನ್ನು ಆನೆಯ ಹಿಡಿತದಿಂದ ಬಿಡಿಸಿ ಕಾಪಾಡಿದಳು.

ಇಷ್ಟಕ್ಕೆ ಮುಗಿಯಲಿಲ್ಲ.ಸಿಟ್ಟುಗೊಂಡ ಆನೆ ಮನೆಯ ಚಾವಣಿಯನ್ನುಮುರಿದು ಮನೆಯೊಳಗೆ ತಲೆ ಹಾಕಿತು. ಭಯದಿಂದ ತತ್ತರಿಸಿದ ನಸೀಮಾ ಆನೆಗೆ ಹಸಿವಾಗಿರಬಹುದೆಂದು ಊಹಿಸಿಮನೆಯಲ್ಲಿದ್ದ ಗೋಧಿ ಚೀಲವನ್ನು ಆನೆಯ ಮುಂದಿರಿಸಿದರು.ಆನೆ ಆ ಚೀಲವನ್ನು ಸೊಂಡಿಲಿನಿಂದ ಹಿಡಿದು ಕಾಡಿನತ್ತ ಹೋಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.