ADVERTISEMENT

ಗಂಡನ ಕಿಡ್ನಿ ಮಾರಿಸಿ ₹10 ಲಕ್ಷ ಹಣದೊಂದಿಗೆ ಪ್ರಿಯಕರನ ಜೊತೆ ಪತ್ನಿ ಪರಾರಿ!

ಪಿಟಿಐ
Published 2 ಫೆಬ್ರುವರಿ 2025, 16:21 IST
Last Updated 2 ಫೆಬ್ರುವರಿ 2025, 16:21 IST
   

ಕೋಲ್ಕತ್ತ: ಮಗಳ ವಿದ್ಯಾಭ್ಯಾಸದ ನೆಪ ಹೇಳಿ ಗಂಡನ ಕಿಡ್ನಿ ಮಾರಿಸಿದ ಮಹಿಳೆಯೊಬ್ಬರು ₹10 ಲಕ್ಷ ಹಣ ತೆಗೆದುಕೊಂಡು ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಕ್ರೇಲ್‌ನಲ್ಲಿರುವ ಪತಿಯ ಕುಟುಂಬ ಸದಸ್ಯರು ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಮಹಿಳೆ ತನ್ನ ಪತಿಗೆ ಕಿಡ್ನಿ ಮಾರಿ ಸ್ವಲ್ಪ ಹಣ ಸಂಪಾದಿಸಿ ತಮ್ಮ ಮನೆಯನ್ನು ಉತ್ತಮ ರೀತಿಯಲ್ಲಿ ನಡೆಸುವಂತೆ ಹಾಗೂ ತಮ್ಮ 12 ವರ್ಷದ ಮಗಳನ್ನು ಒಳ್ಳೆಯ ಶಾಲೆಗೆ ಸೇರಿಸುವಂತೆ ಪೀಡಿಸುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ತನ್ನ ಹೆಂಡತಿಯನ್ನು ನಂಬಿ, ಕಿಡ್ನಿಯನ್ನು ಮಾರಾಟ ಮಾಡಲು ಪತಿ ಒಪ್ಪಿದ್ದಾನೆ. ಕಳೆದ ತಿಂಗಳು ನಡೆದ ಶಸ್ತ್ರಚಿಕಿತ್ಸೆಯ ನಂತರ, ವ್ಯಕ್ತಿ ಮನೆಗೆ ಹಣವನ್ನು ತಂದಿದ್ದಾನೆ. ಶೀಘ್ರವಾಗಿ ಚೇತರಿಸಿಕೊಳ್ಳುವ ದೃಷ್ಟಿಯಿಂದ ಹೊರಗೆ ಕಾಲಿಡದೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಪತ್ನಿ ಹೇಳಿದ್ದಳು. ಅದನ್ನು ನಂಬಿ ಪತಿ ವಿಶ್ರಾಂತಿ ಪಡೆಯುತ್ತಿದ್ದಾಗ ಪತ್ನಿ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ₹10 ಲಕ್ಷದ ಜೊತೆಗೆ ಮನೆಯಲ್ಲಿದ್ದ ಸ್ವಲ್ಪ ಹಣವನ್ನೂ ಹೊತ್ತೊಯ್ದಿದ್ದಾಳೆ ಎಂದು ವರದಿ ತಿಳಿಸಿದೆ.

ಕುಟುಂಬವು ಅಂತಿಮವಾಗಿ ತಮ್ಮ ಸ್ನೇಹಿತರು ಮತ್ತು ಪರಿಚಯಸ್ಥರ ಸಹಾಯದಿಂದ ಕೋಲ್ಕತ್ತದ ಉಪನಗರವಾದ ಬ್ಯಾರಕ್‌ಪೋರ್‌ನಲ್ಲಿರುವ ಮನೆಯಲ್ಲಿ ಮಹಿಳೆ ಇರುವುದನ್ನು ಪತ್ತೆ ಮಾಡಿದ್ದಾರೆ. ಆಕೆಯ ಮನೆಗೆ ತೆರಳಿ ಹಿಂದಿರುವಂತೆ ಮನವಿ ಮಾಡಿದಾಗ, ನೀವು ಮಾನಸಿಕ, ದೈಹಿಕ ಹಿಂಸೆ ನೀಡಿದ್ದೀರೆಂದು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾರೆ. ಮಹಿಳೆ ಯಾವುದೇ ಹಣ ತಂದಿಲ್ಲ ಎಂದು ಆಕೆಯ ಜೊತೆಗಿದ್ದ ವ್ಯಕ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.