ಮಮತಾ ಬ್ಯಾನರ್ಜಿ
– ಪಿಟಿಐ ಚಿತ್ರ
ಕೋಲ್ಕತ್ತ: ‘ವಿವಿಧ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ವಲಸಿಗರ ಮೇಲೆ ನಡೆಸುತ್ತಿರುವ ಕಿರುಕುಳವು ಉದ್ದೇಶಪೂರ್ವಕ ಮತ್ತು ರಾಜಕೀಯ ಪ್ರೇರಿತ ಕೃತ್ಯವಾಗಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಗುಜರಾತ್, ಹರಿಯಾಣ, ರಾಜಸ್ಥಾನ, ಒಡಿಶಾ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಬಂಗಾಳಿ ವಲಸಿಗರ ಮೇಲೆ ಕಿರುಕುಳ ನಡೆಯುತ್ತಿದೆ ಎಂಬ ವರದಿಗಳ ಬಗ್ಗೆ ಬೋಲ್ಪುರದಲ್ಲಿ ನಡೆದ ಆಡಳಿತಾತ್ಮಕ ಪರಿಶೀಲನಾ ಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಿರುಕುಳದಿಂದ ಬೇಸತ್ತು ರಾಜ್ಯಕ್ಕೆ ಮರಳುವ ಬಂಗಾಳಿ ವಲಸಿಗರಿಗೆ ಸಹಾಯ ಮಾಡಲು ಮೀಸಲಾದ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
‘ಬಂಗಾಳಿ ವಲಸಿಗರಿಗೆ ರಾಜ್ಯಕ್ಕೆ ಮರಳಲು ಸಹಾಯ ಮಾಡುವುದು, ಪಡಿತರ ಮತ್ತು ಉದ್ಯೋಗ ಕಾರ್ಡ್‌ಗಳನ್ನು ವಿತರಿಸುವುದು ಮತ್ತು ಸೂರಿಲ್ಲದವರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸುವುದು ಮುಂತಾದ ನಿಬಂಧನೆಗಳನ್ನು ಈ ಯೋಜನೆ ಹೊಂದಿರುತ್ತದೆ’ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರವಲ್ಲ, ಬಡವರು ಮತ್ತು ಹಿಂದುಳಿದ ವರ್ಗದವರನ್ನು ಅವರು (ಬಿಜೆಪಿ) ಗುರಿಯಾಗಿಸಿಕೊಂಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.
‘ಕಿರುಕುಳಕ್ಕೊಳಗಾದ ಎಲ್ಲಾ ಬಂಗಾಳಿ ವಲಸಿಗರ ಪರವಾಗಿ ನಾವು ನಿಲ್ಲಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.