ADVERTISEMENT

‘ಕೊವ್ಯಾಕ್ಸಿನ್: ಎರಡನೇ ಹಂತದ ಪ್ರಯೋಗದ ದತ್ತಾಂಶ ನೀಡಿ’

ಪಿಟಿಐ
Published 10 ಅಕ್ಟೋಬರ್ 2020, 13:00 IST
Last Updated 10 ಅಕ್ಟೋಬರ್ 2020, 13:00 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಕೋವಿಡ್‌–19 ಸಂಭಾವ್ಯ ಲಸಿಕೆಯಎರಡನೇ ಹಂತದ ಪ್ರಯೋಗದ ದತ್ತಾಂಶ ಹಾಗೂ ಕೆಲವು ಸ್ಪಷ್ಟನೆಗಳನ್ನು ನೀಡಬೇಕು ಎಂದು ಲಸಿಕೆಯ ಮೂರನೇ ಹಂತದ ಕ್ಲಿನಿಕಲ್‌ ಪ್ರಯೋಗಕ್ಕೆ ಅನುಮತಿ ಕೋರಿರುವಭಾರತ್‌ ಬಯೋಟೆಕ್‌ಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಇಲಾಖೆ ಸೂಚಿಸಿದೆ.

‘ಕೋವ್ಯಾಕ್ಸಿನ್‌’ ಹೆಸರಿನ ಈ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ಜೊತೆಗೂಡಿ ದೇಶೀಯವಾಗಿ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿದೆ. ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಹೈದರಾಬಾದ್‌ ಮೂಲದ ಈ ಕಂಪನಿಯು ಅ.2ರಂದು ಡಿಸಿಜಿಐಗೆಅನುಮತಿ ಕೋರಿತ್ತು. ದೆಹಲಿ, ಮುಂಬೈ, ಪಟ್ನಾ, ಲಖನೌ ಸೇರಿದಂತೆ 10 ರಾಜ್ಯಗಳ ಪ್ರಮುಖ ನಗರಗಳಲ್ಲಿ 18 ವರ್ಷ ಮೇಲ್ಪಟ್ಟ 28,500 ಜನರ ಮೇಲೆ ಈ ಲಸಿಕೆಯ ಪ್ರಯೋಗವನ್ನು ಮಾಡಲಾಗುವುದು ಎಂದು ಅರ್ಜಿಯಲ್ಲಿ ಕಂಪನಿಯು ತಿಳಿಸಿತ್ತು.

ಮೂಲಗಳ ಪ್ರಕಾರ, ಕೊವ್ಯಾಕ್ಸಿನ್‌ ಲಸಿಕೆಯ ಎರಡನೇ ಹಂತದ ಪ್ರಯೋಗ ನಡೆಯುತ್ತಿದ್ದು, ಕೆಲವೆಡೆ ಪ್ರಯೋಗಕ್ಕೆ ಒಳಗಾದವರಿಗೆ ಎರಡನೇ ಡೋಸ್‌(ನಿರ್ದಿಷ್ಟ ಪ್ರಮಾಣದ ಲಸಿಕೆ) ಇನ್ನಷ್ಟೇ ನೀಡಬೇಕಾಗಿದೆ. ಅರ್ಜಿಯ ಜೊತೆಗೆ ಮೊದಲನೇ ಹಂತ ಹಾಗೂ ಎರಡನೇ ಹಂತದ ಪ್ರಯೋಗದ ಮಧ್ಯಂತರ ದತ್ತಾಂಶವನ್ನಷ್ಟೇ ಕಂಪನಿಯು ನೀಡಿದೆ. ಈ ಅರ್ಜಿಯನ್ನು ತಜ್ಞರ ಸಮಿತಿಯು ಅ.5ರಂದು ಪರಿಶೀಲಿಸಿದ್ದು, ಮೂರನೇ ಹಂತದ ಅಧ್ಯಯನದ ವಿನ್ಯಾಸವು ತೃಪ್ತಿಕರವಾಗಿದ್ದು, ‘ಲಕ್ಷಣರಹಿತ’ ಎಂಬುವುದರ ವಿವರಣೆಯ ಕುರಿತು ಸ್ಪಷ್ಟನೆಯನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.