ADVERTISEMENT

ಬಿಹಾರದಲ್ಲಿ ಕಾಂಗ್ರೆಸ್‌ ಯಾತ್ರೆ: ರಾಹುಲ್ ಗಾಂಧಿ ಪಾಲ್ಗೊಳ್ಳುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 13:35 IST
Last Updated 20 ಫೆಬ್ರುವರಿ 2023, 13:35 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಪಟ್ನಾ: ಬಿಹಾರ ಕಾಂಗ್ರೆಸ್‌ ನಡೆಸುತ್ತಿರುವ ‘ಭಾರತ್ ಜೋಡೊ’ ಯಾತ್ರೆಯ ಅಂತಿಮ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾಗವಹಿಸುವ ಸಾಧ್ಯತೆ ಇದೆ.

ಬಿಹಾರ ಕಾಂಗ್ರೆಸ್‌ ಪಟ್ನಾದಿಂದ ಗಯಾದವರೆಗೂ ಪಾದಯಾತ್ರೆ ನಡೆಸುತ್ತಿದೆ. ಇದಕ್ಕೂ ಸಹ ಭಾರತ್‌ ಜೋಡೊ ಎಂದು ಹೆಸರಿಡಲಾಗಿದೆ.

ಈ ಯಾತ್ರೆಯು ಫೆಬ್ರುವರಿ ಮೂರನೇ ವಾರದಲ್ಲಿ ನಡೆಯಬೇಕಿತ್ತು. ಆದರೆ, ಫೆಬ್ರುವರಿ 24 ರಿಂದ 26 ರ ವರೆಗೆ ಛತ್ತೀಸ್‌ಗಢದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನ ನಡೆಯುವುದರಿಂದ ಪಕ್ಷದ ಹಿರಿಯ ಮುಖಂಡರು ಸಮಾವೇಶದಲ್ಲಿ ಭಾಗವಹಿಸಲು ಅಲ್ಲಿಗೆ ತೆರಳುವ ಸಾಧ್ಯತೆ ಇದೆ. ಹೀಗಾಗಿ ಪಟ್ನಾ–ಗಯಾ ಯಾತ್ರೆಯನ್ನು ಮಾರ್ಚ್ ಮೊದಲ ವಾರಕ್ಕೆ ಮುಂದೂಡಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ADVERTISEMENT

ಯಾತ್ರೆ ಮಾರ್ಚ್ 5 ರಂದು ಆರಂಭವಾಗಿ 7 ರಂದು ಕೊನೆಗೊಳ್ಳುವ ಸಾಧ್ಯತೆ ಇದೆ. ಯಾತ್ರೆ ಸಾಗುವ ಮಾರ್ಗ ಯೋಜಿಸುವ ಹೊಣೆಯನ್ನು ಕಾಂಗ್ರೆಸ್ ಯುವ ಘಟಕದ ಮಾಜಿ ಅಧ್ಯಕ್ಷ ಕುಮಾರ್ ಆಶಿಶ್, ಹಿರಿಯ ನಾಯಕ ನೀರಜ್ ವರ್ಮಾ ಮತ್ತು ಬ್ರಜೇಶ್ ಪಾಂಡೆ ಅವರಿಗೆ ನೀಡಲಾಗಿದೆ.

ಕೊನೆಯ ದಿನ ಗಯಾದಲ್ಲಿ ಬೃಹತ್ ಸಮಾವೇಶ ಆಯೋಜನೆಗೊಳ್ಳಲಿದ್ದು, ರಾಹುಲ್ ಗಾಂಧಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ರಾಹುಲ್‌ ಗಾಂಧಿ ಭಾಗವಹಿಸುವುದು ಇನ್ನು ಖಚಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.