ADVERTISEMENT

ದೇಶದ ಹೆಸರಿನ ಪಕ್ಷ, ಸಂಘಟನೆಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಲಿ: ಮಾಯಾವತಿ

ಪಿಟಿಐ
Published 6 ಸೆಪ್ಟೆಂಬರ್ 2023, 14:12 IST
Last Updated 6 ಸೆಪ್ಟೆಂಬರ್ 2023, 14:12 IST
ಮಾಯಾವತಿ
ಮಾಯಾವತಿ   

ಲಖನೌ: ‘ಭಾರತ್‌’ ಮತ್ತು ‘ಇಂಡಿಯಾ’ ಹೆಸರಿನಲ್ಲಿ ಪೊಳ್ಳು ರಾಜಕಾರಣ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು. ದೇಶದ ಹೆಸರಿನಲ್ಲಿ ರಚನೆಯಾದ ಎಲ್ಲ ರಾಜಕೀಯ ಪಕ್ಷಗಳು, ಮೈತ್ರಿಕೂಟ ಹಾಗೂ ಸಂಘಟನೆಗಳನ್ನು ನಿ‌ಷೇಧಿಸಬೇಕು ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

‘ಭಾರತ್ ಅರ್ಥಾತ್‌ ಇಂಡಿಯಾ ಎಂಬುದು ಸಾಂವಿಧಾನಿಕವಾಗಿಯೂ ಘನತೆಯ ಮತ್ತು ಸುಪ್ರಸಿದ್ಧ ಹೆಸರು. ಎಲ್ಲ‌ ಜಾತಿ ಮತ್ತು ಧರ್ಮಗಳಿಗೆ ಸೇರಿದ ನಮ್ಮ ದೇಶದ ಜನರು, ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ ಹೊಂದಿದ್ದಾರೆ. ದೇಶದ ಜನರ ಭಾವನೆಗಳನ್ನು ಬದಲಾಯಿಸುವ ಮತ್ತು ತಿರುಚುವ ಮೂಲಕ ಆಟವಾಡುವುದು ಅತ್ಯಂತ ಅನುಚಿತ’ ಎಂದು ಮಾಯಾವತಿ ಕಿಡಿಕಾರಿದ್ದಾರೆ.

‘ಸತ್ಯ ಏನೆಂದರೆ, ವಿರೋಧ ಪಕ್ಷಗಳು ಸ್ವತಃ ಬಿಜೆಪಿಗೆ ಸಂವಿಧಾನ ತಿದ್ದಲು ಅವಕಾಶ ಕಲ್ಪಿಸಿವೆ. ಇದೆಲ್ಲವೂ ಸಂಭವಿಸಬಹುದು ಎಂದೇ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಸಲಾಗಿದೆ. ಇದು ಚೆನ್ನಾಗಿ ಯೋಚಿಸಿ ಮಾಡಿರುವ ಪಿತೂರಿಯ ಭಾಗವೇ ಆಗಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ’ ಎಂದು ಮಾಯಾವತಿ ಆರೋಪಿಸಿದರು.

ADVERTISEMENT

‘ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಆಡುತ್ತಿರುವ ರಾಜಕೀಯದ ‘ಅಸಹ್ಯದ ಆಟ’ವಿದು. ಬಡತನ, ಹಣದುಬ್ಬರ, ನಿರುದ್ಯೋಗ ಮತ್ತು ಅಭಿವೃದ್ಧಿಯ ಪ್ರಮುಖ ಸಮಸ್ಯೆಗಳು ಬದಿಗೆ ಸರಿಯುತ್ತಿವೆ. ಆದ್ದರಿಂದ, ನಮ್ಮ ಪಕ್ಷವು ಈ ಜಾತಿವಾದಿ, ಕೋಮುವಾದಿ ಮತ್ತು ಬಂಡವಾಳಶಾಹಿ ಮೈತ್ರಿಗಳಿಂದ ಅಂತರ ಕಾಯ್ದುಕೊಳ್ಳುವುದು ಸಂಪೂರ್ಣವಾಗಿ ಸರಿಯಾಗಿಯೇ ಇದೆ ಮತ್ತು ಸಾರ್ವಜನಿಕ ಹಿತಾಸಕ್ತಿಯೂ ಇದರಲ್ಲಿದೆ’ ಎಂದು ಮಾಯಾವತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.