ADVERTISEMENT

1984 ಡಿಸೆಂಬರ್ 3ರ ಕರಾಳತೆ: ಇಡೀ ಜಗತ್ತು ಈ ದಿನವನ್ನು ಮರೆಯಲ್ಲ, ಕಾರಣವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2025, 9:37 IST
Last Updated 3 ಡಿಸೆಂಬರ್ 2025, 9:37 IST
ಭೋಪಾಲ್ ದುರಂತ: ಯೂನಿಯನ್ ಕಾರ್ಬೈಡ್ ಷರತ್ತುಗಳಿಗೆ ತಲೆಬಾಗಿದ್ದ ಸರ್ಕಾರ..!
ಭೋಪಾಲ್ ದುರಂತ: ಯೂನಿಯನ್ ಕಾರ್ಬೈಡ್ ಷರತ್ತುಗಳಿಗೆ ತಲೆಬಾಗಿದ್ದ ಸರ್ಕಾರ..!   

ಮಧ್ಯ ಪ್ರದೇಶದ ಭೋಪಾಲ್‌ ಹೊರವಲಯದಲ್ಲಿರುವ ಯೂನಿಯನ್‌ ಕಾರ್ಬೈಡ್‌ ಇಂಡಿಯಾ ಲಿಮಿಟೆಡ್‌ (ಯುಸಿಐಎಲ್‌) ಕಂಪನಿಯ ಕೀಟನಾಶಕ ಘಟಕದಲ್ಲಿ ಮೀಥೈಲ್‌ ಐಸೋಸೈನೇಟ್ ವಿಷಾನಿಲ ಸೋರಿಕೆಯಾದ ದುರಂತಕ್ಕೆ ಇಂದಿಗೆ ಸರಿಯಾಗಿ 41 ವರ್ಷಗಳು ಕಳೆದಿದೆ.

1984ರ ಡಿಸೆಂಬರ್ 2ರ ತಡರಾತ್ರಿ ನಡೆದ ಭೂಪಾಲ್ ಅನಿಲ ದುರ್ಘಟನೆಯಲ್ಲಿ 15,000ಕ್ಕೂ ಅಧಿಕ ಜನರು ಮೃತಪಟ್ಟಿದ್ದರೆ, 5 ಲಕ್ಷಕ್ಕೂ ಹೆಚ್ಚು ಜನರು ಅಂಗವೈಕಲ್ಯ ಸೇರಿ ಹಲವು ದೈಹಿಕ ನ್ಯೂನತೆಗಳಿಗೆ ಗುರಿಯಾಗಿದ್ದರು.

ಈ ದುರ್ಘಟನೆ ನಂತರ ಜನಿಸಿದವರ ಪೈಕಿ ಅನೇಕರು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಇದು ವಿಶ್ವದಲ್ಲಿಯೇ ಕೈಗಾರಿಕೆ ಘಟಕವೊಂದರಲ್ಲಿ ನಡೆದ ಅತ್ಯಂತ ಘೋರ ದುರಂತ. ಈ ದುರ್ಘಟನೆ ಸಂಭವಿಸಿ 41 ವರ್ಷಗಳು ಕಳೆದಿದ್ದರೂ ಬದುಕುಳಿದವರಿಗೆ ಈವರೆಗೂ ನ್ಯಾಯ ಸಿಕ್ಕಿಲ್ಲ ಎಂಬುದು ವಿಪರ್ಯಾಸ.

ADVERTISEMENT

ಡಿಸೆಂಬರ್ 2ರ ರಾತ್ರಿ ಭೋಪಾಲ್‌ನ ಜನರು ಮಾತ್ರವಲ್ಲ, ಇಡೀ ಜಗತ್ತಿನ ಜನರು ಈ ಭಯಾನಕ ದುರಂತವನ್ನು ಮರೆಯಲು ಸಾಧ್ಯವೇ ಇಲ್ಲ. ಅಂದು ಸೋಮವಾರ, ಅದು ಭೀಕರ ಸಾವಿನ ಸೋಮವಾರವಾಗಿ ಮಾರ್ಪಟ್ಟಿತ್ತು. ಚುಮುಚುಮು ಚಳಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ 15 ಸಾವಿರ ಜನರ ಪ್ರಾಣ ಯೋಗಿತ್ತು. ಮಾತ್ರವ‌ಲ್ಲ, ಬರೋಬ್ಬರಿ 5ಲಕ್ಷಕ್ಕೂ ಅಧಿಕ ಜನರು ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಒಳಗಾದರು. ಪರಿಣಾಮ ಇಂದಿಗೂ ಅಲ್ಲಿ ಹುಟ್ಟುವ ಮಕ್ಕಳು ಎದುರಿಸುತ್ತಿದ್ದಾರೆ.

ದೀರ್ಘಕಾಲೀನ ಸಮಸ್ಯೆಗಳು:

  • ವಿಷಕಾರಿ ಅನಿಲದಿಂದಾಗಿ ಮಣ್ಣು ಮತ್ತು ಅಂತರ್ಜಲ ಕಲುಷಿತಗೊಂಡಿದೆ.

  • ಸೋರಿಕೆಯ ಪರಿಣಾಮ ಮುಂದಿನ ಪೀಳಿಗೆಗಳಿಗೂ ತಟ್ಟಿದೆ. ಜನಿಸುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಇಂದಿಗೂ ಕಂಡುಬರುತ್ತಿವೆ.

  • ದುರಂತದಿಂದ ಬದುಕುಳಿದವರಿಗೆ ಇನ್ನೂ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ ಸಿಕ್ಕಿಲ್ಲ ಎಂಬುದು ವಿಪರ್ಯಾಸ.

ಪ್ರಸ್ತುತ ಪರಿಸ್ಥಿತಿ:

  • ದುರಂತ ಸಂಭವಿಸಿ 41 ವರ್ಷಗಳಾದರೂ, ಇಂದಿಗೂ ದುರಂತದ ಕರಿನೆರಳು ಜನರ ಮೇಲೆ ಆವರಿಸಿಕೊಂಡಿದೆ.

  • ಕಾರ್ಖಾನೆಯಿಂದ ಉಳಿದ ವಿಷಕಾರಿ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಕೆಲಸ ಇನ್ನೂ ಪೂರ್ಣಗೊಂಡಿಲ್ಲ.

  • ಪೀಡಿತರಿಗೆ ಸೂಕ್ತ ಪರಿಹಾರ ಮತ್ತು ನ್ಯಾಯ ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಸಂತ್ರಸ್ತರು ಆರೋಪಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.