ADVERTISEMENT

ಇನ್ನಷ್ಟು ಸಮಯ ಸಿಕ್ಕಿದ್ದಿದ್ದರೆ ನಾವು ಬಹುಮತ ಸಾಧಿಸುತ್ತಿದ್ದೆವು: ಹೂಡಾ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 14:53 IST
Last Updated 24 ಅಕ್ಟೋಬರ್ 2019, 14:53 IST
   

ನವದೆಹಲಿ:ಹರಿಯಾಣ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಬಿರುಸು ಪಡೆದುಕೊಂಡಿವೆ. ಸದ್ಯ ಯಾವೊಂದು ಪಕ್ಷವೂ ಸ್ಪಷ್ಟ ಬಹುಮತ ಸಾಧಿಸದೆ ಇರುವುದರಿಂದ ಜನನಾಯಕ್‌ ಜನತಾ ಪಕ್ಷ(ಜೆಜೆಪಿ) ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಲೆಕ್ಕಾಚಾರ ಹಾಕುತ್ತಿವೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಹರಿಯಾಣ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಭೂಪಿಂದರ್‌ ಸಿಂಗ್‌ ಹೂಡಾ ಅವರು, ನಮಗೆ ಇನ್ನಷ್ಟು ಸಮಯ ಸಿಕ್ಕಿದ್ದಿದ್ದರೆ ಸಂಪೂರ್ಣ ಬಹುಮತ ಸಾಧಿಸುತ್ತಿದ್ದೆವು. ರಾಜ್ಯದಲ್ಲಿ ನಮಗೆ ಪೂರಕವಾದ ವಾತಾವರಣ ನಿರ್ಮಾಣವಾಗಿತ್ತು ಎಂದಿದ್ದಾರೆ.‘ಜನರು ಕಾಂಗ್ರೆಸ್‌ ಜೊತೆಗೆ ಜೆಜೆಪಿ, ಇತರರು ಸೇರಿ ಸ್ಥಿರ ಸರ್ಕಾರ ರಚನೆಯಾಗುವುದನ್ನು ಬಯಸಿದ್ದಾರೆ’ ಎಂದೂ ಹೇಳಿಕೊಂಡಿದ್ದಾರೆ.

ಹೂಡಾ ಅವರು ಈಗಾಗಲೇ ಜೆಜೆಪಿ ನಾಯಕ ದುಷ್ಯಂತ್‌ ಚೌಟಾಲಾ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬೀ ಅಜಾದ್‌ ಅವರೂಹೂಡಾ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ. ಅವರು, ‘ಹೂಡಾ ಅವರಿಗೆ ಆರು ತಂಗಳು ಮೊದಲೇ ಹರಿಯಾಣ ಕಾಂಗ್ರೆಸ್‌ ನಾಯಕತ್ವವನ್ನು ವಹಿಸಿಕೊಟ್ಟಿದ್ದಿದ್ದರೆ, ಪಕ್ಷವು ಮತ್ತಷ್ಟು ಉತ್ತಮ ಸಾಧನೆ ತೋರುತ್ತಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಶೋಕ್ ತನ್ವಾರ್ ಅವರು ಕಾಂಗ್ರೆಸ್‌ ನಾಯಕತ್ವ ವಹಿಸಿಕೊಂಡ ಬಳಿಕ ಹೂಡಾ ರಾಜ್ಯ ರಾಜಕೀಯದ ಮಟ್ಟಿಗೆ ಹಿನ್ನಲೆಗೆ ಸರಿದಿದ್ದರು. ಆದರೆತನ್ವಾರ್‌ಕೊನೆ ಗಳಿಗೆಯಲ್ಲಿ ಪಕ್ಷಕ್ಕೆ ಕೈಕೊಟ್ಟಿದ್ದರು. ಈ ವೇಳೆ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆಯಾಗಿ ಕುಮಾರಿ ಸೆಲ್ಜಾ ಇದ್ದರೂ, ಸೋನಿಯಾಗಾಂಧಿ ಸೂಚನೆಗೆ ಓಗೊಟ್ಟು ಭೂಪಿಂದರ್ ಸಿಂಗ್ ಹೂಡಾ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು.

ಒಟ್ಟು 90 ಸದಸ್ಯ ಬಲದ ಹರಿಯಾಣ ವಿಧಾನಸಭೆ ಬಹುಮತಕ್ಕೆ 46 ಸ್ಥಾನಗಳ ಅಗತ್ಯವಿದ್ದು, ಇಷ್ಟು ಸಂಖ್ಯೆಯ ಗೆಲುವು ಯಾವುದೇ ಒಂದು ಪಕ್ಷಕ್ಕೆ ದಕ್ಕಿಲ್ಲ. ಮೂರು ಕ್ಷೇತ್ರಗಳ ಫಲಿತಾಂಶ ಇನ್ನೂ ಬಾಕಿಯಿದ್ದು, ಮೂರೂ ಕಡೆ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಸದ್ಯ ಒಟ್ಟು 40 ಕ್ಷೇತ್ರಗಳಲ್ಲಿ ಬಿಜೆಪಿ, 31 ಸ್ಥಾನಗಳನ್ನು ಕಾಂಗ್ರೆಸ್‌, 10 ಕಡೆ ಜೆಜೆಪಿ ಮತ್ತು ಎಂಟು ಸ್ಥಾನಗಳನ್ನು ಇತರರು ಗೆದ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.