ADVERTISEMENT

ಬಿಹಾರ ವಿಧಾನಸಭಾ ಚುನಾವಣೆ: ಜೆಡಿಯುಗೆ ಮತ ಹಾಕಬೇಡಿ ಎಂದ ಚಿರಾಗ್ ಪಾಸ್ವಾನ್

ರಂಗೇರಿದ ಚುನಾವಣಾ ಕಣ

ಆನಂದ್ ಮಿಶ್ರಾ
Published 5 ಅಕ್ಟೋಬರ್ 2020, 20:13 IST
Last Updated 5 ಅಕ್ಟೋಬರ್ 2020, 20:13 IST
ಚಿರಾಗ್
ಚಿರಾಗ್   

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ದಿನ ಸಮೀಪಿಸುತ್ತಿದ್ದು, ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಲೋಕ ಜನಶಕ್ತಿ ಪಕ್ಷವು(ಎಲ್‌ಜೆಪಿ) ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದೆ. ‘ಆಡಳಿತಾರೂಢ ಜೆಡಿಯುಗೆ ಮತ ಹಾಕಬೇಡಿ’ ಎಂದು ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕರೆ ಕೊಟ್ಟಿದ್ದಾರೆ. ರಾಜ್ಯದ ಜನರಿಗೆ ಬಹಿರಂಗ ಪತ್ರಬರೆದಿರುವ ಅವರು, ‘ಜೆಡಿಯುಗೆ ಮತ ನೀಡಿದರೆ, ರಾಜ್ಯದ ಯುವಕರು ಉದ್ಯೋಗಕ್ಕಾಗಿ ಅನ್ಯರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ಮುಂದುವರಿಯಲಿದೆ’ ಎಂದು ಎಚ್ಚರಿಸಿದ್ದಾರೆ.

‘ನಿತೀಶ್ ಕುಮಾರ್ ನಾಯಕತ್ವದಲ್ಲಿಬಿಹಾರ ಚುನಾವಣೆ ಎದುರಿಸುವುದಿಲ್ಲ’ ಎಂದು ಘೋಷಿಸಿದ ಮರುದಿನವೇ ಪಾಸ್ವಾನ್ ಈ ಹೇಳಿಕೆ ನೀಡಿದ್ದಾರೆ. ‘ಜೆಡಿಯು ಜೊತೆ ಮೈತ್ರಿ ಇಲ್ಲ. ಆದರೆ, ಬಿಜೆಪಿ ಜೊತೆ ಮೈತ್ರಿ ಮುಂದುವರಿಯಲಿದ್ದು, ಬಿಹಾರದಲ್ಲಿ ಬಿಜೆಪಿ–ಎಲ್‌ಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.

‘ರಾಜ್ಯದ ಇತಿಹಾಸದಲ್ಲಿ ಇದು ನಿರ್ಣಾಯಕ ಸಮಯ. ಬಿಹಾರದ 12 ಕೋಟಿ ಜನರ ಸಾವು–ಬದುಕಿನ ಪ್ರಶ್ನೆ. ಒಂದೇ ಒಂದು ಮತ ಜೆಡಿಯು ಅಭ್ಯರ್ಥಿಗೆ ಹೋದರೂ, ನಿಮ್ಮ ಮಗು ವಲಸೆ ಹೋಗಲು ಸಿದ್ಧವಾಗಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಅಕ್ಟೋಬರ್ 28ರಿಂದ ಆರಂಭವಾಗಲಿರುವ ಮೂರು ಹಂತದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಕೋರಿದ ಚಿರಾಗ್, ಭಾವನಾತ್ಮಕವಾಗಿ ಬರೆದಿದ್ದಾರೆ. ‘ಕೇಂದ್ರ ಸಚಿವ ರಾಮ್‌ ವಿಲಾಸ್ ಪಾಸ್ವಾನ್ ಅವರ ಮಗ ನಾನು. ಯಾವುದೇ ಸಮಯದಲ್ಲೂ ಸೋಲೊಪ್ಪಿಕೊಳ್ಳುವುದಿಲ್ಲ. ‘ಬಿಹಾರ ಮೊದಲು’ ಚಿಂತನೆಗೆ ಯಾವಾಗಲೂ ಬದ್ಧನಾಗಿರುತ್ತೇನೆ’ ಎಂದಿದ್ದಾರೆ.

‘ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರವು ಕಠಿಣವಾದುದು. ಬಿಹಾರವನ್ನು ಆಳಬೇಕು ಎಂದು ಈ ನಿರ್ಧಾರಕ್ಕೆ ಬಂದಿಲ್ಲ. ಬಿಹಾರದ ಘನತೆ ಕಾಯಬೇಕು ಎಂದು ತಂದೆ ಯಾವಾಗಲೂ ಹೇಳುತ್ತಿದ್ದರು. ನಮ್ಮ ದಾರಿ ಮತ್ತು ಉದ್ದೇಶ ಸರಿಯಾಗಿದ್ದರೆ ನಮ್ಮ ಹಿಂದೆ ಲಕ್ಷಾಂತರ ಜನರು ಬರುತ್ತಾರೆ. ನಾನು ಸುದೀರ್ಘ ಹಾದಿಯಲ್ಲಿ ಸಾಗಬೇಕಿದೆ. ನಿಮ್ಮ ಆಶೀರ್ವಾದದೊಂದಿಗೆ ಹೆಚ್ಚಿನ ಅನುಭವ ಪಡೆಯಬೇಕಿದೆ’ ಎಂದಿದ್ದಾರೆ

ರಾಜ್ಯದಲ್ಲಿ ಮೈತ್ರಿ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಲು ಎಲ್‌ಜೆಪಿ ನಿರ್ಧರಿಸಿದ್ದು, ಕೇಂದ್ರ ಮಟ್ಟದಲ್ಲೂ ಎಲ್‌ಜೆಪಿಯನ್ನು ಮೈತ್ರಿಕೂಟದಿಂದ ಹೊರಗಿಡಬೇಕು ಎಂದು ನಿತೀಶ್ ಕುಮಾರ್ ಅವರು ಬಿಜೆಪಿ ಮೇಲೆ ಒತ್ತಡ ಹೇರುತ್ತಿದ್ದಾರೆ.

50:50 ಸೀಟು ಹೊಂದಾಣಿಕೆ ಸೂತ್ರದ ಪ್ರಕಾರ ಬಿಜೆಪಿ–ಜೆಡಿಯು ಸಮಪ್ರಮಾಣದ ಕ್ಷೇತ್ರಗಳನ್ನು ಪಡೆಯಲಿದ್ದು, ಬಿಜೆಪಿಯ ಪಾಲಿನಲ್ಲಿ ಎಲ್‌ಜೆಪಿಗೆ ಒಂದಿಷ್ಟು ಸೀಟು ಕೊಡುವ ಪ್ರಸ್ತಾವವನ್ನು ಪಕ್ಷ ಒಪ್ಪಲಿಲ್ಲ. ಬಿಹಾರದಲ್ಲಿ ಎನ್‌ಡಿಎ ನಾಯಕರಾಗಿ ನಿತೀಶ್ ಕುಮಾರ್ ಅವರನ್ನು ಬಿಂಬಿಸಲಾಗಿದೆ. ಆದರೆ ರಾಜ್ಯದ ಮುಂದಿನ ಸರ್ಕಾರವು ಬಿಜೆಪಿ ನೇತೃತ್ವದ್ದೇ ಆಗಿರಬೇಕು ಎಂದಿರುವ ಎಲ್‌ಜೆಪಿ, ಪಕ್ಷ ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದಿದ್ದಾರೆ.

ಜೆಡಿಯುಗೆ ಹೊಡೆತ

ಸ್ವತಂತ್ರವಾಗಿ ಸ್ಪರ್ಧಿಸುವ ಎಲ್‌ಜೆಪಿಯ ನಿರ್ಧಾರದಿಂದ ಜೆಡಿಯು ತನ್ನ ಕ್ಷೇತ್ರಗಳನ್ನು, ಅದರಲ್ಲೂ ದಲಿತರ ಮತಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.ಈ ಕ್ಷೇತ್ರಗಳಲ್ಲಿ ಬಿಜೆಪಿ ಪರ ಸಹಾನುಭೂತಿ ಉಳ್ಳವರ ಬೆಂಬಲ ಕಳೆದುಕೊಳ್ಳುವ ಅಪಾಯವೂ ಜೆಡಿಯುಗಿದೆ. ಇದು ಆರ್‌ಜೆಡಿ, ಕಾಂಗ್ರೆಸ್, ಎಡಪಕ್ಷಗಳಮೈತ್ರಿಕೂಟಕ್ಕೂ ಲಾಭವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.