ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಟಿಕೆಟ್ ಅಕಾಂಕ್ಷಿಗಳು ಸೋಮವಾರ ಪಾಟ್ನಾದಲ್ಲಿರುವ ಸಂಯುಕ್ತ ಜನತಾದಳದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ಪಿಟಿಐ ಚಿತ್ರ
ಪಾಟ್ನಾ: ಬಿಹಾರ ವಿಧಾನಸಭೆಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 122 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಸೋಮವಾರದಿಂದ ಆರಂಭಗೊಂಡಿದೆ.
ನವೆಂಬರ್ 11ರಂದು ನಡೆಯುವ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗವು ಅಧಿಸೂಚನೆ ಪ್ರಕಟಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕ್ಷೇತ್ರಗಳಿಗೆ ಅಕ್ಟೋಬರ್ 20ರವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದು. ನಾಮಪತ್ರ ಹಿಂದಕ್ಕೆ ಪಡೆಯಲು ಅಕ್ಟೋಬರ್ 23 ಕೊನೆಯ ದಿನವಾಗಿದೆ.
ಎರಡನೇ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಸೊಸೆ ದೀಪಾ ಮಾಂಝಿ (ಇಮಾಮ್‌ಗಂಜ್), ಕುಮಾರ್ ಸರ್ವಜಿತ್ (ಬೋಧ್‌ಗಯಾ) ಭೋಜ್‌ಪುರಿ ಗಾಯಕ ವಿನಯ್ ಬಿಹಾರಿ (ಲೌರಿಯಾ) ಹಾಗೂ ಬಿಜೆಪಿ ಮಾಜಿ ಸಚಿವ ನಾರಾಯಣ್ ಪ್ರಸಾದ್ (ನೌತನ್) ಪ್ರಮುಖವಾದುವು.
ಮೊದಲ ಹಂತದಲ್ಲಿ ಮತದಾನ ನಡೆಯುವ 121 ಕ್ಷೇತ್ರಗಳ ನಾಮಪತ್ರ ಸಲ್ಲಿಕೆಯು ಶುಕ್ರವಾರದಿಂದ ಆರಂಭಗೊಂಡಿದ್ದು, ಅಕ್ಟೋಬರ್ 17ರವರೆಗೆ ನಾಮಪತ್ರ ಸಲ್ಲಿಸಬಹುದು. ಈ ಕ್ಷೇತ್ರಗಳಿಗೆ ನವೆಂಬರ್ 6ರಂದು ಮತದಾನ ನಡೆಯಲಿದೆ. ನವೆಂಬರ್ 14ರಂದು ಮತಎಣಿಕೆ ನಡೆಯಲಿದೆ.
ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಯುಕ್ತ ಜನತಾದಳದ ಬೆಂಬಲಿಗರು ಸೋಮವಾರ ಇವಿಎಂನ ಪ್ರತಿಕೃತಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮುಖಗವಸು ಧರಿಸಿ ಬೆಂಬಲ ವ್ಯಕ್ತಪಡಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.