
ನವದೆಹಲಿ: ‘ಬಿಹಾರ ಚುನಾವಣೆಯಲ್ಲಿ ಚುನಾವಣಾ ಆಯೋಗದ ನಡೆ ಏಕಪಕ್ಷೀಯವಾಗಿತ್ತು ಮತ್ತು ಇಡೀ ಚುನಾವಣಾ ಪ್ರಕ್ರಿಯೆಗಳು ಪ್ರಶ್ನಾರ್ಹವಾಗಿವೆ’ ಎಂದು ಕಾಂಗ್ರೆಸ್ ಶನಿವಾರ ಆರೋಪ ಮಾಡಿದೆ.
ಬಿಹಾರದಲ್ಲಿ ಕಾಂಗ್ರೆಸ್‌ನ ಕಳಪೆ ಸಾಧನೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
61 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ 6 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. 2010ರಲ್ಲಿ 4 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. ಇದಾದ ನಂತರ, ಈ ಸಲವೇ ಅತ್ಯಂತ ಹೀನಾಯ ಪ್ರದರ್ಶನ ಎಂದು ಸಭೆಯಲ್ಲಿ ಚರ್ಚೆಯಾಯಿತು.
ಒಟ್ಟು 243 ಕ್ಷೇತ್ರಗಳಲ್ಲಿ ಎನ್‌ಡಿಎ 202 ಕ್ಷೇತ್ರಗಳಲ್ಲಿ ಜಯಗಳಿಸಿದ್ದಕ್ಕೆ ಹಿರಿಯ ನಾಯಕರು ಆಶ್ಚರ್ಯ ವ್ಯಕ್ತಪಡಿಸಿದರು. ‘ಮತ ಕಳವು’ ಇಲ್ಲಿ ಕೆಲಸ ಮಾಡಿದೆ ಎಂದೂ ಅವರು ಶಂಕೆ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.
‘ಇಡೀ ಚುನಾವಣಾ ಪ್ರಕ್ರಿಯೆ ಪ್ರಶ್ನಾರ್ಹವಾಗಿದ್ದಾಗ, ಫಲಿತಾಂಶಗಳು ಅನಿರೀಕ್ಷಿತವಾಗಿರುತ್ತವೆ. ಬಿಜೆಪಿಗೆ ದೊರೆತಿರುವಷ್ಟು ಸ್ಟ್ರೈಕ್‌ರೇಟ್ ಈ ಹಿಂದೆ ಯಾವ ಪಕ್ಷಕ್ಕೂ ದೊರೆತಿರಲಿಲ್ಲ. ಎಲ್ಲಿಯೋ ಏನೋ ತಪ್ಪಾಗಿದೆ. ಅದು ಏನು ಎಂಬುದನ್ನು ಮೈತ್ರಿ ಪಾಲುದಾರರ ಜತೆ ಚರ್ಚಿಸಿ ನಿರ್ಧರಿಸಬೇಕು’ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಫಲಿತಾಂಶದ ಬಗ್ಗೆ ಖರ್ಗೆ ಅವರು ಆರ್‌ಜೆಡಿ ನಾಯಕರಾದ ಲಾಲೂ ಪ್ರಸಾದ್, ತೇಜಸ್ವಿ ಯಾದವ್, ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಅವರ ಜತೆ ಮಾತನಾಡಿದ್ದಾರೆ. ‘ಏನೋ ತಪ್ಪಾಗಿದೆ’ ಎಂದು ಈ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಎಲ್ಲ ಮತಗಟ್ಟೆಗಳಿಗೆ ಸಂಬಂಧಿಸಿದ ಫಾರ್ಮ್ 17ಸಿ ಅನ್ನು ಪಡೆದು, ದತ್ತಾಂಶವನ್ನು ಸಮಗ್ರವಾಗಿ ವಿಶ್ಲೇಷಿಸಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಖಜಾಂಚಿ ಅಜಯ್ ಮಾಕೇನ್, ಬಿಹಾರ ಚುನಾವಣಾ ಉಸ್ತುವಾರಿ ಕೃಷ್ಣ ಅಲ್ಲಾವರು ಮತ್ತು ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಭಾಗವಹಿಸಿದ್ದರು.
ಸಭೆಯ ಬಳಿಕ ರಾಹುಲ್ ಗಾಂಧಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಲು ನಿರಾಕರಿಸಿದರು.
‘ಬಿಜೆಪಿ ಸ್ಟ್ರೈಕ್‌ರೇಟ್ ಮೇಲೆ ಅನುಮಾನ’
1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ವ್ಯಕ್ತವಾದ ಸಹಾನುಭೂತಿ ಅಲೆಯ ಮೇಲೆ ಕಾಂಗ್ರೆಸ್ 414 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊರೆತ ಸ್ಟ್ರೈಕ್‌ರೇಟ್‌ಗಿಂತಲೂ ಹೆಚ್ಚು ಸ್ಟ್ರೈಕ್‌ರೇಟ್ ಬಿಹಾರ ಚುನಾವಣೆಯಲ್ಲಿ ಬಿಜೆಪಿಗೆ ದೊರೆತಿದೆ. ಇದು ಹಲವು ಅನುಮಾನಗಳನ್ನು ಮೂಡಿಸಿದೆ ಎಂದು ಕಾಂಗ್ರೆಸ್‌ನ ಖಜಾಂಚಿ ಅಜಯ್ ಮಾಕೇನ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
‘ಈ ಫಲಿತಾಂಶವನ್ನು ಕಾಂಗ್ರೆಸ್ ಅಷ್ಟೇ ಅಲ್ಲದೆ ಬಿಹಾರದ ಜನ ಮತ್ತು ಮೈತ್ರಿಕೂಟದವರಿಗೂ ನಂಬಲಾಗುತ್ತಿಲ್ಲ. ಪಕ್ಷವೊಂದು ಸ್ಪರ್ಧಿಸಿದ್ದ ಕ್ಷೇತ್ರಗಳ ಪೈಕಿ ಶೇ 90ರಷ್ಟು ಕ್ಷೇತ್ರಗಳಲ್ಲಿ ಗೆಲ್ಲುವುದು ಅತ್ಯಂತ ಅಪರೂಪ. ಅಂತಹ ಪರಿಸ್ಥಿತಿ ಬಿಹಾರದಲ್ಲಿ ಇರಲಿಲ್ಲ. ಈ ಬಗ್ಗೆ ಪೂರ್ಣ ದತ್ತಾಂಶ ವಿಶ್ಲೇಷಣೆ ಬಳಿಕ ಒಂದೆರಡು ವಾರಗಳಲ್ಲಿ ಮಾಹಿತಿ ನೀಡಲಾಗುವುದು’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಪ್ರತಿಕ್ರಿಯಿಸಿದರು.
‘ಜಂಗಲ್ ರಾಜ್ ಭೀತಿ: ಎನ್‌ಡಿಎಗೆ ಗೆಲುವು’
‘ಬಿಹಾರದಲ್ಲಿ ಆರ್‌ಜೆಡಿ ಅಧಿಕಾರಕ್ಕೆ ಬಂದರೆ ಜಂಗಲ್ ರಾಜ್ ಮರಳಬಹುದು ಎಂಬ ಭೀತಿ ಜನರಲ್ಲಿತ್ತು. ಇದರಿಂದಾಗಿಯೇ ಮತದಾರರ ಒಂದು ಭಾಗವು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮತಚಲಾಯಿಸಿದೆ’ ಎಂದು ಜನ ಸುರಾಜ್ ಪಕ್ಷ ಚುನಾವಣೆಯನ್ನು ವಿಶ್ಲೇಷಿಸಿದೆ.
ಅಲ್ಲದೆ ದೆಹಲಿಯ ಕೆಂಪುಕೋಟೆ ಬಳಿ ನವೆಂಬರ್ 10ರಂದು ನಡೆದ ಪ್ರಬಲ ಸ್ಫೋಟವು ಸೀಮಾಂಚಲ ಪ್ರದೇಶದಲ್ಲಿ ಮತಗಳ ಧ್ರವೀಕರಣಕ್ಕೆ ಕಾರಣವಾಗಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಚುನಾವಣಾ ಫಲಿತಾಂಶದಿಂದ ನಮಗೆ ನಿರಾಶೆಯಾಗಿದೆ. ಆದರೆ ಅಸಮಾಧಾನ ಆಗಿಲ್ಲ. ನಾವು ಆಡಳಿತಾರೂಢ ಎನ್‌ಡಿಎ ಅನ್ನು ವಿರೋಧಿಸುತ್ತಲೇ ಇರುತ್ತೇವೆ’ ಎಂದರು. ‘ಜೂನ್‌ನಿಂದ ಚುನಾವಣೆ ಘೋಷಣೆ ಆಗುವವರೆಗೆ ನಿತೀಶ್ ಕುಮಾರ್ ಸರ್ಕಾರ ಸುಮಾರು ₹ 40000 ಕೋಟಿಯಷ್ಟು ಸಾರ್ವಜನಿಕರ ಹಣವನ್ನು ಜನರ ಮತಗಳ ಖರೀದಿಗೆ ದುರ್ಬಳಕೆ ಮಾಡಿಕೊಂಡಿದೆ’ ಎಂದು ಅವರು ದೂರಿದರು. ‘ಜೆಡಿಯು 25ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆದ್ದಿರುವ ಕಾರಣ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ರಾಜಕೀಯದಲ್ಲಿ ಸಕ್ರಿಯರಾಗಿ ಇರುತ್ತಾರೆಯೇ’ ಎಂಬ ಪ್ರಶ್ನೆಗೆ ‘ಈ ಪ್ರಶ್ನೆಯನ್ನು ಕಿಶೋರ್ ಅವರನ್ನೇ ಕೇಳಿ’ ಎಂದು ಉತ್ತರಿಸಿದರು.
Cut-off box - ಅಂಕಿ ಅಂಶಗಳು 243 ಒಟ್ಟು ಶಾಸಕರು ––– 29 (2020ರಲ್ಲಿ 26) ಆಯ್ಕೆ ಆಗಿರುವ ಮಹಿಳೆಯರು ––– ಶಾಸಕರ ಶಿಕ್ಷಣ 84 5ರಿಂದ 12ನೇ ತರಗತಿ 147 ಪದವಿ ಮತ್ತು ಅದಕ್ಕಿಂತ ಹೆಚ್ಚು 5 ಡಿಪ್ಲೊಮಾ 7 ಅಕ್ಷರಸ್ಥರು ––– ಅಪರಾಧ ಪ್ರಕರಣ ಎದುರಿಸುತ್ತಿರುವ ಶಾಸಕರು 102 ಗಂಭೀರ ಪ್ರಕರಣ 6 ಕೊಲೆ 19 ಕೊಲೆಯತ್ನ 9 ಮಹಿಳೆಯರ ಮೇಲಿನ ದೌರ್ಜನ್ಯ ––– ಮೂಲ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.