ನರೇಂದ್ರ ಮೋದಿ
-ಪಿಟಿಐ ಚಿತ್ರ
ನವದೆಹಲಿ: ಯುವ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ₹62 ಸಾವಿರ ಕೋಟಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಲೋಕಾರ್ಪಣೆಗೊಳಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರಾಯೋಜಕತ್ವದ ₹60 ಸಾವಿರ ಕೋಟಿ ಹೂಡಿಕೆಯ ‘ಪಿಎಂ–ಸೇತು’ (ಉನ್ನತೀಕರಿಸಿದ ಐಟಿಐಗಳ ಮೂಲಕ ಪ್ರಧಾನ ಮಂತ್ರಿ ಕೌಶಲ ಹಾಗೂ ಉದ್ಯೋಗದ ರೂಪಾಂತರ) ಯೋಜನೆಗೂ ಮೋದಿ ಹಸಿರು ನಿಶಾನೆ ತೋರಿದ್ದಾರೆ.
ಇದೇ ವೇಳೆ ದೇಶದ 34 ರಾಜ್ಯ ಹಾಗೂ ಕೇಂದ್ರಾಡಳಿತ ಪ‍್ರದೇಶದಲ್ಲಿರುವ 400 ನವೋದಯ ವಿದ್ಯಾಲಯ ಹಾಗೂ 200 ಏಕಲವ್ಯ ಮಾದರಿ ವಸತಿಶಾಲೆಗಳಲ್ಲಿ ನಿರ್ಮಿಸಲಾದ 1,200 ವೃತ್ತಿಪರ ಕೌಶಲ ಕೇಂದ್ರಗಳನ್ನು ಮೋದಿ ಉದ್ಘಾಟಿಸಿದ್ದಾರೆ.
‘ಮುಖ್ಯಮಂತ್ರಿ ನಿಶ್ಚಯ್ ಸ್ವಯಂ ಸಹಾಯತಾ ಭತ್ತಾ’ (ಮುಖ್ಯಮಂತ್ರಿ ನಿಶ್ಚಯ ಸ್ವಯಂ ಸಹಾಯತೆ ಭತ್ಯೆ) ಯೋಜನೆಗೆ ಚಾಲನೆ–ಬಿಹಾರದ 5 ಲಕ್ಷ ಪದವೀಧರರಿಗೆ ಮಾಸಿಕ ₹1 ಸಾವಿರ ನೆರವು, ಉಚಿತ ಕೌಶಲ ತರಬೇತಿ ವ್ಯವಸ್ಥೆಗೂ ಅವರು ಚಾಲನೆ ನೀಡಿದ್ದಾರೆ.
ಬಿಹಾರದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಅಕಾಡೆಮಿಕ್, ಸಂಶೋಧನಾ ಕೇಂದ್ರಗಳ ಸ್ಥಾಪನೆ ಹಾಗೂ ಪಟ್ನಾದಲ್ಲಿ ಹೊಸತಾಗಿ ನಿರ್ಮಿಸಿದ ಎನ್‌ಐಟಿ ಕ್ಯಾಂಪಸ್ ಅನ್ನು ಅವರು ಲೋಕಾರ್ಪಣೆ ಮಾಡಿದ್ದಾರೆ.
ಇದೇ ವೇಳೆ 4 ಸಾವಿರ ಮಂದಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ₹450 ಕೋಟಿ ವಿದ್ಯಾರ್ಥಿವೇತನವನ್ನು ವಿತರಣೆ ಮಾಡಿದ್ದಾರೆ.
ಬಿಹಾರ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆಯನ್ನೂ ಆರಂಭಿಸಿದ್ದು, ₹4 ಲಕ್ಷದವರೆಗೆ ಬಡ್ಡಿರಹಿತ ಶಿಕ್ಷಣ ಸಾಲವನ್ನು ಒದಗಿಸುತ್ತದೆ. ಇದು ಉನ್ನತ ಶಿಕ್ಷಣದ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಈ ಯೋಜನೆಯಡಿ 3.92 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ₹7,880 ಕೋಟಿಗೂ ಹೆಚ್ಚಿನ ಸಾಲ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.