
ಸಂಸದೆ ಶಾಂಭವಿ ಚೌಧರಿ, ನಿತೀಶ್ ಕುಮಾರ್
ಬೆಂಗಳೂರು: ಬಿಹಾರ ಚುನಾವಣೆಯಲ್ಲಿ ಎನ್‌ಡಿಯ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿರುವ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ.
ಏತನ್ಮಧ್ಯೆ ಎಲ್‌ಜೆಪಿ ರಾಮ್ ವಿಲಾಸ್ ಪಾಸ್ವಾನ್ ಅವರ ಪಕ್ಷದ ಯುವ ಸಂಸದೆ ಶಾಂಭವಿ ಚೌಧರಿ ಅವರು ನಿತೀಶ್ ಕುಮಾರ್ ಅವರೇ ಬಿಹಾರಕ್ಕೆ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಸಿಎಂ ಆಗಿ ಅವರೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೀಡಿದ ಭರವಸೆಗಳನ್ನು ಅವರೇ ಪೂರೈಸಲಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಎಎನ್‌ಐ ಟ್ವೀಟ್ ಮಾಡಿದೆ.
ಶಾಂಭವಿ ಚೌಧರಿ ಅವರು ಬಿಹಾರದ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರವಾದ ಸಮಷ್ಠಿಪುರದ ಸಂಸದೆಯಾಗಿದ್ದಾರೆ.
ವಿಶೇಷ ಎಂದರೆ ಈ ಬಾರಿ ಎನ್‌ಡಿಎ ಕೂಟ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ಜೊತೆ ಸೇರಿ ಬಿಹಾರದಲ್ಲಿ ಅಧಿಕಾರಕ್ಕೆ ಬರುವ ಕನಸು ಕಂಡಿದ್ದಲ್ಲದೇ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಹೇಳಿದ್ದರು. ಆದರೆ, ಅವರ ಮಹಾಘಟಬಂಧನ್ ಕಳಪೆ ಸಾಧನೆ ಮಾಡಿರುವುದು ಸದ್ಯದ ವರದಿಗಳ ಪ್ರಕಾರ ಗೊತ್ತಾಗಿದೆ.
ಹೀಗಾಗಿ ಎನ್‌ಡಿಎ ಭರ್ಜರಿ ಜಯ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರೇ ಸಿಎಂ ಆಗಲಿದ್ದಾರೆ ಎಂದು ಹಲವರು ಚರ್ಚಿಸುತ್ತಿದ್ದಾರೆ. ಮೋದಿ–ಅಮಿತ್ ಶಾ ಜೊತೆ ಜೆಡಿಯು ನಾಯಕರ ಚರ್ಚೆಯ ಬಳಿಕ ಅಧಿಕೃತ ಘೋಷಣೆ ಹೊರಬಿಳ್ಳಲಿದೆ.
ಸರಿ ಸುಮಾರು 20 ವರ್ಷ ಬಿಹಾರ ಸಿಎಂ ಆಗಿರುವ 74 ವರ್ಷದ ನಿತೀಶ್ ಕುಮಾರ್ ಅವರು ಮತ್ತೆ ಬಿಹಾರ ಆಡಳಿತದ ಚುಕ್ಕಾಣಿ ಹಿಡಿಯುವರೋ ಅಥವಾ ಏನಾದರೂ ಬದಲಿ ನಿರ್ಧಾರ ತೆಗೆದುಕೊಳ್ಳುವರೋ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.