
ಪ್ರಶಾಂತ್ ಕಿಶೋರ್
(ಪಿಟಿಐ ಚಿತ್ರ)
ಪಟ್ನಾ: ‘ವಿಧಾನಸಭಾ ಚುನಾವಣೆಗೂ ಮುನ್ನ ಪ್ರತಿ ಕ್ಷೇತ್ರದ ಆರು ಸಾವಿರ ಫಲಾನುಭವಿಗಳಿಗೆ ₹10 ಸಾವಿರ ನೀಡದಿದ್ದರೆ ಮತ್ತು ಸ್ವ–ಉದ್ಯೋಗ ಯೋಜನೆಯಡಿ 1.5 ಕೋಟಿ ಮಹಿಳೆಯರಿಗೆ ₹2 ಲಕ್ಷ ಆರ್ಥಿಕ ನೆರವು ನೀಡುವ ಭರವಸೆ ನೀಡಿರದಿದ್ದರೆ ಜೆಡಿಯು ಕೇವಲ 25 ಸ್ಥಾನಗಳಿಗೆ ಸೀಮಿತವಾಗುತ್ತಿತ್ತು‘ ಎಂದು ಜನ ಸುರಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಮಂಗಳವಾರ ಹೇಳಿದರು.
‘ಎನ್‌ಡಿಎ ಸರ್ಕಾರವು ಜನರ ಹಣದಿಂದ ₹40 ಸಾವಿರ ಕೋಟಿ ನೀಡುವುದಾಗಿ ಹೇಳಿ, ಚುನಾವಣೆ ಸಮೀಪಿಸುತ್ತಿರುವಾಗ ಅದನ್ನು ಬಿಡುಗಡೆ ಮಾಡಿದೆ’ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ತಪ್ಪು ಮಾಡಿರಬಹುದು. ಆದರೆ, ಮತಕ್ಕಾಗಿ ವಿಭಜನೆ ಮತ್ತು ಮುಗ್ದ ಜನರ ಮತದಾನದ ಹಕ್ಕನ್ನು ಖರೀದಿಸುವ ಅಪರಾಧವನ್ನು ಮಾಡಿಲ್ಲ’ ಎಂದು ಹೇಳಿದರು.
'ಚುನಾವಣೆಯಲ್ಲಿ ಸೋತಿದ್ದಕ್ಕಾಗಿ ಬಿಹಾರದ ಜನತೆಯಲ್ಲಿ ಕ್ಷಮೆಯಾಚಿಸುತ್ತೇನೆ. ನಾನು ರಾಜಕೀಯ ನಿವೃತ್ತಿ ಪಡೆಯುವುದಿಲ್ಲ ಮತ್ತು ಬಿಹಾರವನ್ನು ತೊರೆಯುವುದಿಲ್ಲ’ ಎಂದು ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಗಳನ್ನು ಎನ್‌ಡಿಎ ಸರ್ಕಾರ ಪೂರ್ಣಗೊಳಿಸಿದರೆ ಮತ್ತು ರಾಜ್ಯದ 1.5 ಕೋಟಿ ಮಹಿಳೆಯರಿಗೆ ₹2 ಲಕ್ಷ ಆರ್ಥಿಕ ನೆರವು ನೀಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕಿಶೋರ್ ಹೇಳಿದರು.
ಚುನಾವಣೆಯಲ್ಲಿ ಜೆಡಿಯು 25ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಪ್ರಶಾಂತ್‌ಕಿಶೋರ್ ಅವರು ಚುನಾವಣೆಗೂ ಮುನ್ನ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.