ADVERTISEMENT

Bihar Elections: ‘ಇಂಡಿಯಾ’ ಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು

ಬಿಹಾರ ಚುನಾವಣೆ: 30 ಕ್ಷೇತ್ರಗಳಿಗೆ ಪಟ್ಟು ಹಿಡಿದ ಸಿಪಿಐ (ಎಂಎಲ್‌) ಎಲ್‌

ಪಿಟಿಐ
Published 7 ಅಕ್ಟೋಬರ್ 2025, 13:04 IST
Last Updated 7 ಅಕ್ಟೋಬರ್ 2025, 13:04 IST
<div class="paragraphs"><p>ಬಿಹಾರ ಚುನಾವಣೆ</p></div>

ಬಿಹಾರ ಚುನಾವಣೆ

   

(ಚಿತ್ರ ಕೃಪೆ: X/@ECISVEEP)

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗೆ ‘ಇಂಡಿಯಾ’ ಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಮೈತ್ರಿಕೂಟದಲ್ಲಿ ಎಡಪಕ್ಷಗಳಿಗೆ 19 ಸ್ಥಾನಗಳನ್ನು ನೀಡುವ ಆರ್‌ಜೆಡಿ ಪ‍್ರಸ್ತಾವವನ್ನು ಸಿಪಿಐ (ಎಂಎಲ್‌) ಎಲ್‌ ಸಾರಾಸಗಟಾಗಿ ತಿರಸ್ಕರಿಸಿದೆ. 

ADVERTISEMENT

ಆರ್‌ಜೆಡಿ ‍ಪ್ರಸ್ತಾವವನ್ನು ‘ಪಕ್ಷದ ಘನತೆಯ ಮೇಲಿನ ದಾಳಿ’ ಎಂದು ಸಿಪಿಐ (ಎಂಎಲ್‌) ಎಲ್‌ ನಾಯಕರು ಕರೆದಿದ್ದಾರೆ. ಪಕ್ಷವು ಎಲ್ಲ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡಿದೆ ಎಂದು ಅವರು ಎಚ್ಚರಿಸಿದ್ದಾರೆ. ಪಕ್ಷವು 2020ರಲ್ಲಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 12ರಲ್ಲಿ ಗೆಲುವು ಸಾಧಿಸಿತ್ತು. ಪಕ್ಷದ ಮತ ಪ್ರಮಾಣ ಶೇ 3.16 ಆಗಿತ್ತು. ಈ ಬಾರಿ 40 ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂದು ಪಕ್ಷವು ಆರಂಭದಲ್ಲಿ ಒತ್ತಾಯಿಸಿತ್ತು. 

19 ಸ್ಥಾನಗಳ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಮೂಲಕ ಪಕ್ಷವು ಆರ್‌ಜೆಡಿ ಬಳಿ ತನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷ ಕಳೆದ ಬಾರಿ ಗೆದ್ದಿದ್ದ ಮೂರು ಸ್ಥಾನಗಳನ್ನು ಸಹ ಕಿತ್ತುಕೊಳ್ಳಲಾಗಿದೆ. ಇದು ಗೌರವಯುತ ಪ್ರಸ್ತಾವ ಅಲ್ಲ ಎಂದು ಮೂಲಗಳು ತಿಳಿಸಿವೆ. ಸಿಪಿಐ (ಎಂಎಲ್) ಎಲ್ ಹೊಸ ಪಟ್ಟಿ ಸಲ್ಲಿಸಲಿದ್ದು, ಸುಮಾರು 30 ಸ್ಥಾನಗಳಿಗೆ ತನ್ನ ಬೇಡಿಕೆ ಮುಂದಿಡಲಿದೆ. 

‘ಇದು ಪಕ್ಷದ ಘನತೆ ಪ್ರಶ್ನೆ. ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಮಗೆ ಸ್ಥಾನಗಳನ್ನು ಬಿಟ್ಟುಕೊಡುವುದೆಂದರೆ ಖಚಿತವಾಗಿ ಗೆಲುವು ಎಂದರ್ಥ. ಅಚ್ಚರಿಯ ಸಂಗತಿಯೆಂದರೆ ಆರ್‌ಜೆಡಿ ಅದನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಅಥವಾ ಅರ್ಥಮಾಡಿಕೊಳ್ಳಲು ಸಿದ್ಧರಿಲ್ಲ. ಅವರು ಗೆಲ್ಲಲು ಬಯಸಿದರೆ, ಅವರು ಪರಿಷ್ಕೃತ ಪಟ್ಟಿಯನ್ನು ಸ್ವೀಕರಿಸಬೇಕು’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.

2020ರಲ್ಲಿ ಸಿಪಿಐ (ಎಂಎಲ್) ಎಲ್ ಕೊನೆಯ ಕ್ಷಣದಲ್ಲಿ ಮಹಾ ಮೈತ್ರಿಕೂಟ ಪ್ರವೇಶಿಸಿತ್ತು. ಆಗ ಪಕ್ಷವು 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಜಿಸಿತ್ತು. ಆದರೆ, ಆರ್‌ಜೆಡಿಯು 19 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿತ್ತು.

ಇನ್ನೊಂದೆಡೆ, 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ 19ರಲ್ಲಷ್ಟೇ ಗೆದ್ದಿತ್ತು. ಎಡಪಕ್ಷಗಳ ಸ್ಟ್ರೈಕ್‌ ರೇಟ್‌ ಉತ್ತಮವಾಗಿತ್ತು. ಕಾಂಗ್ರೆಸ್‌ಗೆ ಸ್ವಲ್ಪ ಕಡಿಮೆ ಸ್ಥಾನ ನೀಡಿ ಎಡಪಕ್ಷಗಳಿಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದರೆ ಮಹಾಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇತ್ತು ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿಯೂ ಸಿಪಿಐ (ಎಂಎಲ್‌) ಎಲ್ ಸ್ಪರ್ಧಿಸಿದ ಎರಡೂ ಸ್ಥಾನಗಳನ್ನು ಗೆದ್ದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.