ADVERTISEMENT

ನ.9ಕ್ಕೆ ಲಾಲೂಗೆ ಜಾಮೀನು; ಮಾರನೆಯ ದಿನವೇ ನಿತೀಶ್‌ಗೆ ಬೀಳ್ಕೊಡುಗೆ–ತೇಜಸ್ವಿ ಯಾದವ್

ಬಿಹಾರ ಚುನಾವಣೆ

ಪಿಟಿಐ
Published 23 ಅಕ್ಟೋಬರ್ 2020, 12:10 IST
Last Updated 23 ಅಕ್ಟೋಬರ್ 2020, 12:10 IST
ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌
ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌   

ಹಿಸುವಾ (ಬಿಹಾರ): ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್‌ ನವೆಂಬರ್‌ 9ರಂದು ಜಾಮೀನು ಪಡೆದು ಜೈಲಿನಿಂದ ಹೊರ ಬರಲಿದ್ದಾರೆ ಹಾಗೂ ಮಾರನೆಯ ದಿನವೇ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರಿಗೆ ಬೀಳ್ಕೊಡುಗೆ ಸಿಗಲಿದೆ ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಪ್ರತಿಪಾದಿಸಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನವೆಂಬರ್‌ 10ರಂದು ನಡೆಯಲಿದೆ. ಮೇವು ಹಗರಣ ಪ್ರಕರಣದ ಸಂಬಂಧ ಲಾಲೂ ಪ್ರಸಾದ್‌ ಜಾರ್ಖಂಡ್‌ನ ರಾಂಚಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೇವು ಹಗರಣದ ಚಾಯ್‌ಬಾಸಾ ಖಜಾನೆ ಸಂಬಂಧಿಸಿದ ಪ್ರಕರಣದಲ್ಲಿ ಜಾರ್ಖಂಡ್‌ ಹೈಕೋರ್ಟ್‌ ಲಾಲೂ ಅವರಿಗೆ ಜಾಮೀನು ಮಂಜೂರು ಮಾಡಿದೆ, ಆದರೆ ದುಮಕಾ ಖಜಾನೆ ಹಣ ವಂಚನೆ ಪ್ರಕರಣದಲ್ಲಿ ಜಾಮೀನು ವಿಚಾರಣೆ ನಡೆಯುತ್ತಿದೆ.

'ಲಾಲೂ ಜೀ ನವೆಂಬರ್‌ 9ರಂದು ಬಿಡುಗಡೆಯಾಗಲಿದ್ದಾರೆ. ಅವರಿಗೆ ಆಗಲೇ ಒಂದರಲ್ಲಿ ಜಾಮೀನು ಸಿಕ್ಕಿದ್ದು, ನವೆಂಬರ್‌ 9ರಂದು ಮತ್ತೊಂದು ಪಡೆಯಲಿದ್ದಾರೆ, ಅಂದು ನನ್ನ ಹುಟ್ಟಿದ ದಿನವೂ ಆಗಿದೆ. ಮಾರನೆಯ ದಿನ ನಿತೀಶ್‌ಜಿ ಅವರಿಗೆ ಬೀಳ್ಕೊಡುಗೆ ಸಿಗಲಿದೆ' ಎಂದು ತೇಜಸ್ವಿ ಯಾದವ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಬಿಹಾರದಲ್ಲಿ ಮೂರು ಹಂತಗಳಲ್ಲಿ ಅಕ್ಟೋಬರ್‌ 28, ನವೆಂಬರ್‌ 3 ಹಾಗೂ ನವೆಂಬರ್‌ 7ರಂದು ಮತದಾನ ಪ್ರಕ್ರಿಯೆ ನಡೆಯಲಿದೆ ಹಾಗೂ ನವೆಂಬರ್‌ 10ರಂದು ಫಲಿತಾಂಶ ಪ್ರಕಟವಾಗಲಿದೆ.

'ನಿತೀಶ್‌ ಅವರೇ ನಿಮಗೆ ಆಯಾಸವಾಗಿದೆ. ಬಿಹಾರ ನೋಡಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ' ಎಂದು ನಿತೀಶ್‌ (69) ಅವರನ್ನು 30 ವರ್ಷ ವಯಸ್ಸಿನ ತೇಜಸ್ವಿ ಮೂದಲಿಸಿದ್ದಾರೆ. ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ನಿತೀಶ್‌ ನೇತೃತ್ವದ ಸರ್ಕಾರ ಭ್ರಷ್ಟಾಚಾರ ತೊಡೆದು ಹಾಕಲು ವಿಫಲವಾಗಿದೆ, ಕೈಗಾರಿಕೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುವುದು ಹಾಗೂ ಉದ್ಯೋಗ ನೀಡುವುದು, ಜೀವನಾಂಶಗಳಿಗಾಗಿ ವಲಸೆ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.